ಬೆಂಗಳೂರು: ಇಂದು ಹಾಗೂ ನಾಳೆ ಆಗಸದಲ್ಲೊಂದು ವಿಸ್ಮಯ ನಡೆಯಲಿದೆ. ಚಂದದ ಚಂದ್ರಮಾಮ ಇನ್ನಷ್ಟು ಪ್ರಜ್ವಲಿಸುತ್ತಾನೆ. ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್ ಸಂಭ್ರಮ ಇರಲಿದೆ.
ಪ್ರತಿ ತಿಂಗಳು ಹುಣ್ಣಿಮೆ ಘಟಿಸೋದು ಸಾಮಾನ್ಯ. ಆದರೆ ಇಂದು ಶುರುವಾಗಿ ನಾಳೆ ಭಾನುವಾರದವರೆಗೆ ಆಗಸದಲ್ಲಿ ಕಂಗೊಳಿಸುತ್ತಾನಲ್ಲ ಚಂದಿರ ಅದು ಮಾತ್ರ ಕಣ್ಣಿಗೆ ಸೊಗಸಾದ ದೃಶ್ಯ ವೈಭವ. ಈ ಬಾರಿಯ ಮಾಘ ಮಾಸದಲ್ಲಿ ಬಂದ ಹುಣ್ಣಿಮೆ ಚಂದಿರ, ಸೂಪರ್ ಮೂನ್ ಆಗಿದೆ. ಶನಿವಾರ ಸಂಜೆ 4 ಗಂಟೆ 2 ನಿಮಿಷಕ್ಕೆ ಶುರುವಾಗಿ ಭಾನುವಾರ ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಈ ಮಾಘ ಹುಣ್ಣಿಮೆ ಮುಗಿಯಲಿದೆ.
ವಿಜ್ಞಾನಿಗಳ ಪಾಲಿನ ಈ ವಿಸ್ಮಯ, ಜ್ಯೋತಿಷ್ಯದಲ್ಲಿ ಮಾತ್ರ ಸಣ್ಣ ಆತಂಕ ಹುಟ್ಟಿಸಿದೆ. ಹುಣ್ಣಿಮೆಯು ಶನಿ ನಕ್ಷತ್ರದಲ್ಲಿ ಘಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೌರ್ಣಮಿಯ ಮೇಲೆ ಶನಿಯ ನೇರ ದೃಷ್ಠಿ ಇದೆ. ಗ್ರಹಣದ ಬೆನ್ನಲ್ಲೆ ಬಂದ ಪೌರ್ಣಿಮೆ ಶ್ರೇಷ್ಠದಿನವಾದರೂ ಸೂಪರ್ ಮೂನ್ ಪ್ರಕೃತಿಯ ಮೇಲೆ ಅಸಹಜ ಪರಿಣಾಮ ಬೀರುತ್ತದೆ. ಪೌರ್ಣಿಮೆಯ ಅವಧಿ ಸುದೀರ್ಘವಾಗಿರುವುದರಿಂದ ಮನುಷ್ಯರಲ್ಲಿ ಮಾನಸಿಕ ತೊಳಲಾಟ, ದ್ವಂದ್ವಗಳು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿವೆ.