ಬೆಂಗಳೂರು: ಕಾಂಗ್ರೆಸ್ ಆಂತರ್ಯದಲ್ಲಿ ಹುದುಗಿರುವ ಅಸಮಾಧಾನ, ರಾಜ್ಯ ನಾಯಕರ ಬಗೆಗಿನ ಅಸಹನೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟ ಬಯಲಾಗಿದೆ.
ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರೀಕರಾದ ಎಸ್.ಆರ್. ಪಾಟೀಲ ಭಾನುವಾರ ಹೇಳಿದ್ದಾರೆ. ಆದರೆ, ಮೇ 25ರಂದೇ ಅವರು ರಾಜೀನಾಮೆ ಕೊಟ್ಟಿದ್ದರು. ‘ಹಿಂದೆ ಸಚಿವ ಸ್ಥಾನ ಅನುಭವಿಸಿದ ಹಿರಿಯರಿಗೆ ಈ ಬಾರಿ ಸಚಿವ ಸ್ಥಾನ ನೀಡಬಾರದು ಎಂಬ ಅಭಿಪ್ರಾಯ ಇದೆ. ಇದನ್ನು ಹೈಕಮಾಂಡ್ ಗಮನಕ್ಕೂ ತರಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕವಷ್ಟೇ, ಪಾಟೀಲರ ರಾಜೀನಾಮೆ ಬಹಿರಂಗವಾಗಿದೆ. ಇದರ ಹಿಂದೆ, ಅಸಮಾಧಾನದ ಹೊಗೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇಂಧನ ಖಾತೆ ಜತೆಗೆ ಉಪ ಮುಖ್ಯಮಂತ್ರಿ ಹುದ್ದೆ ಬಯಸಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಎರಡೂ ಸ್ಥಾನಗಳು ಕೈತಪ್ಪಿವೆ. ಸಿಟ್ಟಿನಿಂದ ಕುದಿಯುತ್ತಿರುವ ಅವರು ಪರೋಕ್ಷವಾಗಿ ತಮ್ಮ ಕುದಿಕೋಪ ಹೊರಹಾಕಿದ್ದಾರೆ. ಮೈತ್ರಿ ಪಕ್ಷಗಳ ಖಾತೆ ಹಂಚಿಕೆ (ಇಂಧನ ಖಾತೆಯನ್ನು ಜೆಡಿಎಸ್ಗೆ ಬಿಟ್ಟುಕೊಟ್ಟ ನಂತರ) ಹಾಗೂ ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ಪಕ್ಷದ ವರಿಷ್ಠರು ಘೋಷಿಸಿದ ಬಳಿಕ ಅವರು ಹೊರಗೆ ಕಾಣಿಸಿಕೊಂಡಿಲ್ಲ. ಕರೆಯನ್ನೂ ಸ್ವೀಕರಿಸುತ್ತಿಲ್ಲ.
ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ , ಪಕ್ಷದ ನಾಯಕರೇ ತಮ್ಮ ಸೋಲಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ತಕ್ಷಣವೇ ಮೈತ್ರಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದರಿಂದಾಗಿ ಹಿರಿಯರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಳ್ಳಲಿಲ್ಲ. ಸಚಿವ ಸ್ಥಾನದ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಸುಮ್ಮನಿದ್ದರು. ಹಿರಿಯರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಸಿಟ್ಟನ್ನು ಹೊರಹಾಕಲು ಮುಂದಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಖರವಾಗಲಿದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.
ಪರಮೇಶ್ವರ ಧೋರಣೆಗೆ ಆಕ್ಷೇಪ: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತರುವ ಹೊತ್ತಿನಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಪಕ್ಷದ ರಾಜ್ಯ ನಾಯಕರು ಪರಮೇಶ್ವರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಮೈತ್ರಿ ಸರ್ಕಾರ ರಚನೆಗೆ ಹೈಕಮಾಂಡ್ ಸೂಚನೆ ನೀಡಿದ ಕೂಡಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮನೆಗೆ ಪರಮೇಶ್ವರ ಭೇಟಿ ನೀಡಿದ್ದರು. ಹೀಗೆ ತೆರಳುವ ಮೊದಲು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾಗಿದ್ದ ಎಸ್.ಆರ್. ಪಾಟೀಲ, ಇಂದಿಗೂ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ಸುಳಿವನ್ನೂ ನೀಡಿರಲಿಲ್ಲ. ಪಕ್ಷದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ಹಿರಿಯರಿಗೆ ತಿಳಿಸಲೂ ಇಲ್ಲ. ಇದು ಪಕ್ಷದಲ್ಲಿ ತೀವ್ರ ಅಸಹನೆ ಹುಟ್ಟು ಹಾಕಿದೆ.
ಕುಮಾರಗೆ ಪೂರ್ಣಾಧಿಕಾರಕ್ಕೆ ತಕರಾರು
ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಣೆ ಕೂಡ ನಾಯಕರ ಸಿಟ್ಟಿಗೆ ಕಾರಣವಾಗಿದೆ. 37 ಸ್ಥಾನ ಗೆದ್ದ ಪಕ್ಷವೊಂದರ ಬಾಲ ಹಿಡಿದುಕೊಳ್ಳುವ ದೈನೇಸಿ ಸ್ಥಿತಿ ಬೇಕಿರಲಿಲ್ಲ. ಹೈಕಮಾಂಡ್ ಹೇಳಿದ ಕಾರಣಕ್ಕೆ ಒಪ್ಪುವುದು ಅನಿವಾರ್ಯ. ಆದರೆ, ಪ್ರತಿಯೊಂದಕ್ಕೂ ಮಿತ್ರ ಪಕ್ಷದ ನಾಯಕರ ಮುಂದೆ ಅಂಗಲಾಚುವ ಪರಿಸ್ಥಿತಿ ಬರಬಾರದಿತ್ತು. ಈ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರ ಜತೆ ಸೌಜನ್ಯಕ್ಕಾದರೂ ಹೈಕಮಾಂಡ್ ಚರ್ಚಿಸಬೇಕಾಗಿತ್ತು ಎಂದು ಅನೇಕರು ಅಭಿಪ್ರಾಯ ಹೊಂದಿದ್ದಾರೆ.
ಮೈತ್ರಿಯ ಬಗ್ಗೆ ತಕರಾರಲಿಲ್ಲ. ಆದರೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಗೆ ಬೇಕೆಂದು ಪಟ್ಟು ಹಿಡಿಯಲು ಅವಕಾಶವಿತ್ತು. ಅದನ್ನೂ ಮಾಡದೇ ಇರುವುದು ಸರಿಯಲ್ಲ ಎಂಬುದು ಹಿರಿಯರ ಕೋಪಕ್ಕೆ ಕಾರಣ.
ಅತೃಪ್ತಿ ಸ್ಫೋಟದ ಬಳಿಕವೇ ಬಿಜೆಪಿ ಆಟ
ಜೆಡಿಎಸ್– ಕಾಂಗ್ರೆಸ್ ಕೂಡಿಕೆ ಸರ್ಕಾರದಲ್ಲಿ ಅತೃಪ್ತಿ ಸ್ಫೋಟಿಸಬಹುದು, ಮತ್ತೆ ಸರ್ಕಾರ ರಚನೆಗೆ ಅವಕಾಶ ಹುಡುಕಿಕೊಂಡು ಬರಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿ ಇನ್ನೂ ಜೀವಂತವಾಗಿದೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹತ್ತು ದಿನಗಳು ಕಳೆಯುತ್ತಾ ಬಂದಿದ್ದು, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ಸಂಪುಟದಲ್ಲಿ ಯಾರು ಇರಬೇಕು ಎಂಬ ವಿಷಯದಲ್ಲಿ ‘ದೋಸ್ತಿ’ ಪಕ್ಷಗಳ ನಾಯಕರು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಐದಾರು ಬಾರಿ ಶಾಸಕರಾಗಿ ಆಯ್ಕೆಯಾಗಿ ‘ಸಾಮರ್ಥ್ಯ’ ಪ್ರದರ್ಶಿಸಿರುವ ಕಾಂಗ್ರೆಸ್ನ ಅನೇಕ ಹಿರೀಕರಿಗೆ ಇನ್ನೂ ಸಚಿವರಾಗುವ ‘ಭಾಗ್ಯ’ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಗೆ 22 ಸಚಿವ ಸ್ಥಾನ ದೊರಕಿದೆ. ಇರುವ 78 ಶಾಸಕರಲ್ಲಿ ಇಷ್ಟು ಸ್ಥಾನಗಳನ್ನು ಯಾರಿಗೆ ಹಂಚುವುದು ಎಂಬ ಇಕ್ಕಟ್ಟಿನಲ್ಲಿ ಪಕ್ಷ ಸಿಲುಕಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…