ಕಾಪು, : ಗಾಳಿ ಮಳೆಯ ಪರಿಣಾಮ ಕಾಪು – ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ನಡೆದಿದೆ.
ಕಾಪುವಿನಿಂದ ಪಾದೂರಿಗೆ ತೆರಳುತ್ತಿದ್ದ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಾದೂರು ಕೂರಾಲು ರೈಸ್‌ಮಿಲ್ ಬಳಿಯ ನಿವಾಸಿ ಪುಷ್ಪ ಕುಲಾಲ್ ಮತ್ತು ಕಳತ್ತೂರು ನಿವಾಸಿ ಕೃಷ್ಣ ಮುಖಾರಿ ಮೃತಪಟ್ಟಿದ್ದು ರಿಕ್ಷಾ ಚಾಲಕ ಶರೀಫ್ ಎಂಬಾತ ಪವಾಡ ಸಧೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದೇ ರಿಕ್ಷಾದಲ್ಲಿ ಪ್ರಯಾಣಿಕರಾಗಿ ಕಾಪುವಿನಿಂದ ಮನೆಗೆ ತೆರಳುತ್ತಿದ್ದ ಪುಷ್ಪಾ ಕುಲಾಲ್ ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯಲ್ಲಿ ಶಾಶ್ವತ ಅಂಗೈವಕಲ್ಯದಿಂದ ಬಳಲುತ್ತಿರುವ ಸಹೋದರಿಯೊಬ್ಬರಿದ್ದು ಅವರ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಪುಷ್ಪಾ ಅವರೇ ನಿರ್ವಹಿಸುತ್ತಿದ್ದರು. ತಾಯಿಯಂತೆ ಆರೈಕೆ ಮಾಡುತ್ತಿದ್ದ ಸಹೋದರಿಯನ್ನು ಕಳೆದುಕೊಂಡ ಅವರ ಆಕ್ರಂಧನ ಮುಗಿಲು ಮುಟ್ಟಿದೆ. ಮೃತ ಕೃಷ್ಣ ಮುಖಾರಿ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ರಿಕ್ಷಾದ ಮೇಲಿನಿಂದ ಮರವನ್ನು ತೆರವು ಗೊಳಿಸಲು ಭಾರೀ ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ಒಂದೂವರೆ ಗಂಟೆಗಳ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು. ಆದರೆ ರಿಕ್ಷಾದೊಳಗೆ ಸಿಲುಕಿದ್ದ ಪ್ರಯಾಣಿಕರು ಅಷ್ಟರಲ್ಲೇ ಮೃತ ಪಟ್ಟಿದ್ದು ಮೃತದೇಹಗಳನ್ನು ಹೊರಗೆ ತೆಗೆದು, ಅಂಬುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು ಜನರನ್ನು ನಿಯಂತ್ರಿಸಲು ಕಾಪು ಎಸ್ಸೈ ಸುಮಾ ಬಿ., ಕ್ರೈಂ ಎಸ್ಸೈ ಭರತೇಶ ಕಂಕಣವಾಡಿ ಸಹಿತ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳು ಪರದಾಡುವಂತಾಯಿತು. ಜನ ಮತ್ತೆ ಮತ್ತೆ ಘಟನಾ ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ನಡೆಸಲೂ ತೊಂದರೆಯಾಗಿದ್ದು, ಜನರನ್ನು ನಿಯಂತ್ರಿಸಲು ಸ್ಥಳೀಯರು ಪೊಲೀಸರೊಂದಿಗೆ ಕೈ ಜೋಡಿಸಿದ್ದರು. ರಸ್ತೆ ಸಂಚಾರವೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ವಾಹನಗಳಿಗೆ ಪಾದೂರು-ಮಜೂರು ರಸ್ತೆ ಮೂಲಕ ಸಂಚರಿಸಳು ಅನುವು ಮಾಡಿಕೊಡಲಾಯಿತು.
ಸ್ವಲ್ಪದರಲ್ಲೇ ಪಾರಾದ ಮತ್ತೊಂದು ರಿಕ್ಷಾ : ಮರ ಉರುಳಿ ಬೀಳುವಾಗ ಮತ್ತೊಂದು ರಿಕ್ಷಾ ಸ್ಪಲ್ಪದರಲ್ಲೇ ಪಾರಾಗಿದ್ದು ರಿಕ್ಷಾ ಚಾಲಕ ಗಟ್ಟಿ ಧೈರ್ಯ ತೋರಿದ ಪರಿಣಾಮ ಚಾಲಕ ಮತ್ತು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗುವಂತಾಗಿದೆ. ಮರ ಬೀಳುತ್ತಿರುವುದನ್ನು ಗಮನಿಸಿದ ರಿಕ್ಷಾ ಚಾಲಕ ಕೂಡಲೇ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದ್ದು ಮಳೆ ಕಾರಣ ರಿಕ್ಷಾ ಅಲ್ಲೇ ಮಗುಚಿ ಬಿದ್ದಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…