Featured

ಕಾಪು: ಹೊಸ ದಾಖಲೆ ಬರೆಯುವತ್ತ ಉಚ್ಚಿಲ ದಸರಾ – ಇಂದು ವೈಭವದ ಬೃಹತ್ ಶೋಭಾಯಾತ್ರೆ – Vishwanews24

ಕಾಪು: ಹೊಸ ದಾಖಲೆ ಬರೆಯುವತ್ತ ಹೆಜ್ಜೆಯಿಟ್ಟ ಉಚ್ಚಿಲ ದಸರಾ  – ಇಂದು ವೈಭವದ ಬೃಹತ್ ಶೋಭಾಯಾತ್ರೆ – ಕಾಪು ಬೀಚ್‌ನಲ್ಲಿ ಬೃಹತ್‌ ಗಂಗಾರತಿ

ಕಾಪು: ಕರ್ನಾಟಕದ ಕೊಲ್ಹಾಪುರ ಖ್ಯಾತಿಯ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಚ್ಚಿಲ ದಸರಾ ಉತ್ಸವ 2023ರ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನಾ ಶೋಭಾಯಾತ್ರೆಯು ಅ. 24ರಂದು ಸಂಜೆ ನಾಲ್ಕು ಗಂಟೆಯಿಂದ ನಡೆಯಲಿದ್ದು ಶೋಭಾಯಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಮೂರು ಲಕ್ಷ ಜನರ ನಿರೀಕ್ಷೆ:

ವಿಜಯದಶಮಿ, ದಸರಾ ಪ್ರಯುಕ್ತ ಮಂಗಳವಾರ ಮೂರು ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಒಂದು ಲಕ್ಷಕ್ಕೂ ಅಧಿಕ ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಟ್ಯಾಬ್ಲೋಗಳನ್ನು ಹೊರತುಪಡಿಸಿ ಜನರು ಕಾಲ್ನಡಿಗೆ ಮೂಲಕ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಜಲಸ್ತಂಭನದ ಸಂದರ್ಭದಲ್ಲೂ ಐವತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

ಕಾಪು ಬೀಚ್‌ನಲ್ಲಿ ಬೃಹತ್‌ ಗಂಗಾರತಿ:

ನವದುರ್ಗೆಯರು ಮತ್ತು ಶಾರದಾ ಮೂರ್ತಿಯ ಮೆರವಣಿಗೆಯು ಕಾಪು ಬೀಚ್‌ ತಲುಪಿದ ಬಳಿಕ ಕಾಶಿಯಲ್ಲಿ ಗಂಗಾನದಿ ತಟದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ 10 ಬೃಹತ್‌ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ. ವಿಗ್ರಹಗಳ ವಿಸರ್ಜನ ಪೂರ್ವದಲ್ಲಿ ಹತ್ತು ಸಾವಿರ ಸುಮಂಗಲೆಯರಿಂದ ಕಾಪು ಸಮುದ್ರ ತೀರದಲ್ಲಿ ಸಾಮೂಹಿಕ ಮಹಾ ಮಂಗಳಾರತಿ ನೆರವೇರಲಿದೆ. ಈ ವೇಳೆ ಕಾಪುವಿನ ಸಮುದ್ರ ಮಧ್ಯದಲ್ಲಿ 100 ದೋಣಿಗಳಿಂದ ಕೃತಕ ದ್ವೀಪ ಸೃಷ್ಟಿ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.

ದಾಖಲೆ ಬರೆಯುವತ್ತ ಉಚ್ಚಿಲ ದಸರಾ:

ದ.ಕ. ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಉತ್ಸವವು ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ ದಸರಾ ವೈಭವದ ಮಾದರಿಯಲ್ಲೇ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಹೊಸ ದಾಖಲೆ ಬರೆಯವತ್ತ ಹೆಜ್ಜೆಯನ್ನಿಡುತ್ತಿದ್ದು ಇದಕ್ಕಾಗಿ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್‌, ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌ ಹಾಗೂ ಉಚ್ಚಿಲ ದಸರಾ ಸಮಿತಿಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಮೆರವಣಿಗೆ ಸಾಗುವ ಹಾದಿ:

ಸಂಜೆ 3 ಗಂಟೆಗೆ ವಿಸರ್ಜನ ಪೂಜೆ ನಡೆದು, 4 ಗಂಟೆಗೆ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಶ್ರೀ ಮಹಾಲಕ್ಷ್ಮೀ ದ್ವಾರದ ಬಳಿ ಶಾರದಾ ಮಾತೆ ಮತ್ತು ನವದುರ್ಗೆಯರಿಗೆ ಪುಷ್ಪಾರ್ಚನೆ, ಬಳಿಕ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಿಂದ ಎರ್ಮಾಳ್‌-ಉಚ್ಚಿಲ- ಮೂಳೂರು-ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್‌(ದೀಪಸ್ತಂಭದ ಬಳಿ)ಗೆ ಬಂದು ಮಹಾಮಂಗಳಾರತಿ, ಗಂಗಾರತಿ ಬಳಿಕ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ.

ಐದು ಸಾವಿರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ:

ಬೆಳಗ್ಗೆ 11.30ರಿಂದ ಅನ್ನಸಂತರ್ಪಣೆ, ರಾತ್ರಿ ಉಪಾಹಾರದ ವ್ಯವಸ್ಥೆ ಇದೆ. ದಸರಾಕ್ಕೆ ಆಗಮಿಸುವ ಭಕ್ತರಿಗಾಗಿ ಉಚ್ಚಿಲ ಸರಸ್ವತಿ ಮಂದಿರ ಕ್ರೀಡಾಂಗಣ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಶಾಲೆ ಬಳಿಯ ಬಯಲು ಪ್ರದೇಶ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದ ಪ್ರದೇಶ, ಮೊಗವೀರ ಭವನದ ಸುತ್ತಮುತ್ತಲಿನಲ್ಲಿ ಸಹಿತ ವಿವಿಧ ಸ್ಥಳಗಳನ್ನು ಪಾರ್ಕಿಂಗ್‌ಗಾಗಿ ಮೀಸಲಿಡಲಾಗಿದ್ದು ಐದು ಸಾವಿರ ವಾಹನಗಳನ್ನು ನಿಲ್ಲಿಸಬಹುದಾಗಿದೆ.

ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಪೊಲೀಸರ ಮನವಿ:

ಬೃಹತ್‌ ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸ್‌ ಇಲಾಖೆ ಮತ್ತು ದಸರಾ ಸಮಿತಿ ಜತೆಗೂಡಿ ವಿವಿಧ ವ್ಯವಸ್ಥೆಗಳನ್ನು ಮಾಡ‌ಲಾಗಿದೆ. ಆದರೂ ದಸರಾ ಶೋಭಾಯಾತ್ರೆ ಸಂದರ್ಭದಲ್ಲಿ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು ಮಂಗಳೂರಿನಿಂದ ಉಡುಪಿಗೆ ಬರುವ ಹೆದ್ದಾರಿ ಸಂಚಾರಿಗಳು ಪಡುಬಿದ್ರಿ-ಮುದರಂಗಡಿ-ಶಿರ್ವ-ಕಟಪಾಡಿ ರಸ್ತೆ ಹಾಗೂ ಉಡುಪಿಯಿಂದ ಮಂಗಳೂರಿಗೆ ತೆರಳುವವರು ಕಟಪಾಡಿ-ಶಿರ್ವ-ಮುದರಂಗಡಿ-ಪಡುಬಿದ್ರಿ ರಸ್ತೆಯಲ್ಲಿ ಸಂಚರಿಸಿದರೆ ಉತ್ತಮ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌. ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮನವಿ ಮಾಡಿದ್ದಾರೆ.

ಅತ್ಯಾಕರ್ಷಕ ಟ್ಯಾಬ್ಲೋ:

ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳಗೊಂಡ 10 ಟ್ಯಾಬ್ಲೋಗಳ ಸಹಿತವಾಗಿ, ಸಾಮಾಜಿಕ ಜಾಗೃತಿಯ ಸಂದೇಶ ಸಾರುವ ಟ್ಯಾಬ್ಲೋಗಳು, ಭಜನ ತಂಡಗಳು, ತೈಯ್ಯಂ, ಮೀನು, ಬಟರ್‌ಫ್ಲೆ$ç ಸಹಿತ ವಿವಿಧ ವೇಷ ಭೂಷಣಗಳು, ಹುಲಿ ವೇಷ ತಂಡಗಳು, ಚಂಡೆ ಬಳಗ, ನಾದ ಸ್ವರ, ನಾಸಿಕ್‌ ಬ್ಯಾಂಡ್‌ ತಂಡಗಳು ಸಹಿತ 50ಕ್ಕೂ ಅಧಿಕ ಟ್ಯಾಬ್ಲೋಗಳನ್ನೊಳಗೊಂಡ ಶೋಭಾಯಾತ್ರೆಯು ಕರಾವಳಿಯ ಇತಿಹಾಸದಲ್ಲಿಯೇ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬರಲಿದೆ.

ಶೋಭಾಯಾತ್ರೆಗೆ ರಂಗು ತರಲಿರುವ ವಿಶಿಷ್ಟ ಕರಿಯಾನೆ:

ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣ ಮಾಡುವ ಬೆಂಗಳೂರಿನ ಪ್ರಸಿದ್ಧ ಪ್ರತಿರೂಪಿ ಸಂಸ್ಥೆಯ ಹರಿಪ್ರಸಾದ್‌ ಶೆಟ್ಟಿ ನೇತೃತ್ವದಲ್ಲಿ ನಿರ್ಮಿಸಲಾಗಿರುವ ಬೃಹತ್‌ ಕರಿಯಾನೆಯು ಶ್ರೀ ಮಹಾಲಕ್ಷ್ಮೀ ದೇವರ ಬಲಿಮೂರ್ತಿ ಯನ್ನು ಹೊತ್ತುಕೊಂಡು ಉಚ್ಚಿಲ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ. ಒಂದು ತಿಂಗಳ ಕಾಲಾವಕಾಶದಲ್ಲಿ ಫೈಬರ್‌ ಗ್ಲಾಸ್‌ ಮತ್ತು ಮೆಟಲ್‌ ಬಳಸಿ ನಿರ್ಮಿಸಲಾಗಿರುವ ಆನೆಯು ಅಂಬಾರಿ ಸಹಿತವಾಗಿ 1 ಟನ್‌ನಷ್ಟು ತೂಕ ಹೊಂದಿದ್ದು ಸುಮಾರು 15 ಅಡಿ ಎತ್ತರವಿದೆ.

ಉಚ್ಚಿಲ ದಸರಾ 2023ರಲ್ಲಿ ಈವರೆಗೆ ಐದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು ವಿಶೇಷ ಎಂಬಂತೆ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಅ. 23 ಮತ್ತು 24ರಂದು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧೆಡೆ ಪಾರ್ಕಿಂಗ್‌ ಸೌಲಭ್ಯವನ್ನು ಜೋಡಿಸಲಾಗಿದ್ದು ಪೊಲೀಸ್‌ ಇಲಾಖೆ, ಸ್ವಯಂಸೇವಕರ ಸಹಕಾರದೊಂದಿಗೆ ವೈಭವದ ವಿಸರ್ಜನ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳು ತಮ್ಮ ಮನೆಗಳ ಮುಂಭಾಗದಲ್ಲಿ ತಳಿರು ತೋರಣಗಳಿಂದ ಶೃಂಗರಿಸಿ, ದಾರಿಯಲ್ಲಿ ವಾಹನಗಳನ್ನು ನಿಲ್ಲಿಸದೆ ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದೇವೆ.-ಜಿ. ಶಂಕರ್‌, ಉಚ್ಚಿಲ ದಸರಾ ರೂವಾರಿ

ಚಂಡಿಕಾಯಾಗ, ಮಹಾಅನ್ನಸಂತರ್ಪಣೆ:

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ 2023ರ ಪ್ರಯುಕ್ತ ಅ. 24 ವಿಜಯದಶಮಿಯಂದು ಪೂರ್ವಾಹ್ನ ಉದಯಪೂಜೆ, ಸಾಮೂಹಿಕ ಪ್ರಾರ್ಥನೆ, ಭಜನ ಕಾರ್ಯಕ್ರಮ, ಮಧ್ಯಾಹ್ನ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ರಿಂದ ಚಂಡಿಕಾಯಾಗ, ಪೂರ್ಣಾಹುತಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ವಿಸರ್ಜನ ಪೂಜೆ, 4 ಗಂಟೆಗೆ ವೈಭವದ ಶೋಭಾಯಾತ್ರೆ, ರಾತ್ರಿ 10.30ಕ್ಕೆ ಕಾಪು ಬೀಚ್‌(ದೀಪಸ್ತಂಭ ಬಳಿ)ನಲ್ಲಿ ಸುಮಂಗಲೆಯರಿಂದ ಮಹಾಮಂಗಳಾರತಿ, ಕಾಶಿಯಿಂದ ಬಂದಿರುವ ಪುರೋಹಿತರಿಂದ ಗಂಗಾರತಿ, ಜಲಸ್ತಂಭನ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

1 hour ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

1 hour ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

2 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

2 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

2 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

2 hours ago