ಉಡುಪಿ

ಜಿಲ್ಲೆಗೆ ಪ್ರಥಮ ಬಾರಿ ಆಗಮನ.. ಉಡುಪಿಯಲ್ಲಿ ಚುನಾವಣ ಪ್ರಚಾರ: ಕಾಂಗ್ರೆಸ್‌ ಶಿಕ್ಷಿಸಿ: ಪ್ರಧಾನಿ ಮೋದಿ

ಉಡುಪಿ: ಹಿಂಸೆಯಿಂದ ತನ್ನ ರಾಜಕೀಯ ವಿರೋಧಿಗಳನ್ನು ಹಣಿಯುತ್ತಿರುವ ಕಾಂಗ್ರೆಸನ್ನು ಸೋಲಿಸಿ ಗಾಂಧಿಯ ಕನಸನ್ನು ನನಸಾಗಿಸಬೇಕು ಎಂದು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸನ್ನು ಈ ಬಾರಿ ಮತದಾರರು ಶಿಕ್ಷಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಕೊಲೆಗಡುಕ ಸಂಸ್ಕೃತಿಯ ಸರಕಾರವೆಂದೂ ಕಟುವಾಗಿ ಟೀಕಿಸಿದರು. ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನೂ ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕಾಂಗ್ರೆಸ್‌ ಅನ್ನು ವಿಸರ್ಜಿಸಬೇಕೆಂಬುದು ಗಾಂಧೀಜಿಯವರ ಆಶಯವಾಗಿತ್ತು. ನಾಲ್ಕು ವರ್ಷಗಳಿಂದ ಈ ಅವಕಾಶ ಬೇರೆ ರಾಜ್ಯಗಳಿಗೆ ಸಿಕ್ಕಿತ್ತು. ಈಗ ಕರ್ನಾಟಕದವರದ್ದು. ಅದನ್ನು ಸಾಕಾರಗೊಳಿಸಬೇಕು ಎಂದು ಮನವಿ ಮಾಡಿದರು.

ಕೊಲೆ ಸಂಸ್ಕೃತಿಯ ಸರಕಾರ
ರಾಜ್ಯದ ಕಾಂಗ್ರೆಸ್‌ ಸರಕಾರ ತನ್ನ ರಾಜಕೀಯ ವಿರೋಧಿಗಳನ್ನು ಕೊಲ್ಲುವ ಕೆಲಸ ಮಾಡುತ್ತಿದೆ. ಸುಮಾರು ಎರಡು ಡಜನ್‌ನಷ್ಟು ಅಮಾಯಕರನ್ನು ಇದೇ ಕಾರಣಕ್ಕೆ ದಮನಿಸುವ ಮೂಲಕ ರಾಜಕೀಯ ಹಿಂಸೆಯನ್ನು ಬೆಂಬಲಿಸಿದೆ. ಕೇಂದ್ರ ಸರಕಾರ ‘ಈಸಿ ಆಫ್ ಡೂಯಿಂಗ್‌ ಬ್ಯುಸಿನೆಸ್‌’ ಎಂದು ಹೇಳುತ್ತಿದ್ದರೆ, ರಾಜ್ಯ ಕಾಂಗ್ರೆಸ್‌ ಸರಕಾರ ‘ಈಸಿ ಆಫ್ ಡೂಯಿಂಗ್‌ ಮರ್ಡರ್‌’ನಲ್ಲಿ ಪ್ರವೃತ್ತವಾಗಿದೆ. ಇದು ಅದರ ಮರ್ಡರ್‌ ಕಲ್ಚರ್‌ನ್ನು ಬಿಂಬಿಸುತ್ತದೆ. ರಾಜ್ಯದ ಯುವಜನರ ಭವಿಷ್ಯ ಉಜ್ವಲವಾಗಬೇಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಕ್ತಿ ನೀಡಬೇಕು ಎಂದರು.

ಕಾನೂನು ಸುವ್ಯವಸ್ಥೆ ಕುಸಿತ
ರಾಜ್ಯದಲ್ಲಿ ಅತ್ಯಾಚಾರ, ಹಿಂಸೆ, ಕಾನೂನು ವ್ಯವಸ್ಥೆ ಕುಸಿತದಿಂದ ಜನ ಸಾಮಾನ್ಯರ ಸುರಕ್ಷೆಗೆ ಧಕ್ಕೆ ಇದೆ. ಲೋಕಾಯುಕ್ತರ ಮೇಲೂ ಹಲ್ಲೆ ನಡೆದಿದೆ. ಹಿಂದೆ ಯಾವುದ್ಯಾವುದೋ ಮಾಫಿಯಾ ಇತ್ತು. ಈಗ ಮರಳು ಮಾಫಿಯಾ. ಉಡುಪಿ ಜಿಲ್ಲೆಯಲ್ಲಿ ಮರಳು ಮಾಫಿಯಾ ನಿರ್ಮೂಲನೆಗೆ ಹೈಕೋರ್ಟ್‌ ಮಧ್ಯಪ್ರವೇಶಿಸಬೇಕಾಯಿತು. ಅಧಿಕಾರದಲ್ಲಿದ್ದವರ ಬೆಂಬಲವಿಲ್ಲದೇ ಮರಳು ಮಾಫಿಯಾ ಹೀಗೆ ಬೆಳೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.

ಸ್ವಚ್ಛ, ಸುಂದರ, ಸುರಕ್ಷಿತ ಕರ್ನಾಟಕ 
ಇದಕ್ಕೆಲ್ಲ ಪರಿಹಾರವೆಂಬಂತೆ ಕರ್ನಾ ಟಕದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕು. ಸ್ವಚ್ಛ, ಸುಂದರ, ಸುರಕ್ಷಿತ ಕರ್ನಾಟಕಕ್ಕೆ ಬಿಜೆಪಿ ನೇತೃತ್ವದ ಸರಕಾರ ಸ್ಥಾಪನೆಗೊಳ್ಳಬೇಕು. ಆಗ ಕರ್ನಾಟಕದ ಅಭಿವೃದ್ಧಿಗೆ ದಿಲ್ಲಿಯ ಕೇಂದ್ರ ಸರಕಾರವೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದೆ. ಇದು ಖಚಿತ ಎಂದು ಭರವಸೆ ನೀಡಿದರು.

ಸಾಮಾನ್ಯರ ಸೇವೆಗೆ ಬ್ಯಾಂಕ್‌
ಕರಾವಳಿ ಕರ್ನಾಟಕ ಬ್ಯಾಂಕ್‌ಗಳ ತವರೂರು. ಇದುವರೆಗೆ ಬ್ಯಾಂಕ್‌ ಗಳಲ್ಲಿ ಶೇ.40ರಿಂದ 50 ರಷ್ಟು ಬಡವರು ವ್ಯವಹಾರ ನಡೆಸುತ್ತಿರಲಿಲ್ಲ. ನಾವು ಜನ್‌ ಧನ್‌ ಖಾತೆಯನ್ನು ತೆರೆದ ಮೇಲೆ 80 ಸಾವಿರ ಕೋಟಿ ರೂ. ಜಮೆಯಾಯಿತು. ಹಾಗೆಯೇ ಇದುವರೆಗೆ ಯುವಜನರು ಸ್ವ ಉದ್ಯೋಗಕ್ಕಾಗಿ ಸಾಲ ಕೇಳಲು ಹೊರಟರೆ ಅವರಿಗೆ ಬ್ಯಾಂಕ್‌ ನಿಂದ ಲಾಭ ದೊರಕುತ್ತಿರಲಿಲ್ಲ. ಬ್ಯಾಂಕ್‌ಗಳಿಗೆ ಹೋದರೆ ಆಸ್ತಿ ಇದೆಯೆ? ಠೇವಣಿ ಎಷ್ಟಿದೆ? ಎಂದು ಕೇಳುತ್ತಿದ್ದರು. ಇದೆಲ್ಲ ಇದ್ದರೆ ಆತ ಬ್ಯಾಂಕ್‌ ಗೆ ಸಾಲ ಕೇಳಲು ಹೋಗುತ್ತಿದ್ದನೆ? ಕಾಂಗ್ರೆಸ್‌ ಲೂಟಿ ಮಾಡಿತೇ ಹೊರತು ಬೇರೇನೂ ಮಾಡಲಿಲ್ಲ. ಮುದ್ರಾ ಯೋಜನೆಯನ್ನು ಜಾರಿಗೆ ತಂದ ಬಳಿಕ ಸಾಕಷ್ಟು ಸಾಲ ವಿತರಿಸಲಾಗಿದೆ. ಯುವ ಶಕ್ತಿ, ಬ್ಯಾಂಕ್‌ನ ಧನಶಕ್ತಿ, ಸರಕಾರದ ಇಚ್ಛಾಶಕ್ತಿಯ ತ್ರಿವೇಣಿ ಸಂಗಮ ದೇಶದ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀಲಿ ಕ್ರಾಂತಿ, ಸಾಗರ ಮಾಲಾ
ನೀಲಿ ಕ್ರಾಂತಿ (ಬ್ಲೂ ರೆವೊಲುಶನ್‌), ಸಾಗರ ಮಾಲಾ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಮೀನುಗಾರಿಕೆಗೆ ಬಹಳಷ್ಟು ಅನುಕೂಲವಾಗಲಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಪ್ರಗತಿ ಕಾಣದ ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲ್ವೇ ಮಾರ್ಗದ ಕೆಲಸ ಈಗ ನಡೆಯುತ್ತಿದೆ ಎಂದರು. ಭಾಷಣದುದ್ದಕ್ಕೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸ್ವ ಉದ್ಯೋಗದ ಹಂಬಲ, ಶಿಕ್ಷಣದತ್ತ ಒಲವನ್ನು ಉಲ್ಲೇಖೀಸಿ ಅಭಿನಂದಿಸಿದರಲ್ಲದೇ, ಹಿಂದಿನಿಂದಲೂ ಜನಸಂಘವನ್ನು ಬೆಂಬಲಿಸಿದ ಪ್ರದೇಶವಿದು ಎಂದರು. ಒಟ್ಟೂ ಸುಮಾರು 40 ನಿಮಿಷಗಳ ಭಾಷಣಕ್ಕೆ ಜನರೂ ತಮ್ಮ ಜೈಕಾರ ಹಾಗೂ ಚಪ್ಪಾಳೆಗಳ ಮೂಲಕ ಪ್ರತಿಸ್ಪಂದಿಸಿದರು.

ವೇದಿಕೆ ಏರದ ಅಭ್ಯರ್ಥಿಗಳು

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ವೇದಿಕೆ ಏರಲಿಲ್ಲ. ಏರಿದರೆ ಖರ್ಚು ವೆಚ್ಚ ಅಭ್ಯರ್ಥಿಗಳಿಗೆ ಬರುತ್ತದೆ ಎನ್ನುವುದೇ ಇದಕ್ಕೆ ಕಾರಣ. ಕೇವಲ ಇಷ್ಟೇ ಅಲ್ಲ, ಅಭ್ಯರ್ಥಿಗಳಾದ ರಘುಪತಿ ಭಟ್‌, ಸುನಿಲ್‌ಕುಮಾರ್‌, ಲಾಲಾಜಿ, ಸುಕುಮಾರ ಶೆಟ್ಟಿ ಸಭೆಯ ಹೊರಭಾಗ ಬಂದು ಮೋದಿಯವರ ಕೈಕುಲುಕಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ದೂರದಲ್ಲಿ ಪಾಲ್ಗೊಂಡು ಹಿಂದಿರುಗಿದರು.

40 ವರ್ಷ ಹಿಂದಿನ ಉಡುಪಿ ಪುರಸಭೆ
ಉಡುಪಿ ಪುರಸಭೆ ಆಡಳಿತವನ್ನು 40 ವರ್ಷಗಳ ಹಿಂದೆ ಜನಸಂಘ ನಡೆಸಿತ್ತು. ಇದಕ್ಕೆ ದೇಶಮಟ್ಟದಲ್ಲಿ ಮಾನ್ಯತೆ ಇತ್ತು ಮತ್ತು ಅನೇಕ ಪ್ರಶಸ್ತಿಗಳು ಬಂದಿದ್ದವು ಎಂದ ಮೋದಿಯವರು ಸ್ವಚ್ಛತೆಗೆ ಬಹಳ ಆದ್ಯತೆ ಕೊಡಲಾಗಿತ್ತು ಎನ್ನುವ ಮೂಲಕ ಆ ಕಾಲದಲ್ಲಿ ತಲೆ ಮೇಲೆ ಮಲ ಹೊರುವ ಪದ್ಧತಿ ರದ್ದುಗೊಳಿಸಿದ ದೇಶದ ಪ್ರಥಮ ಪುರಸಭೆ ಎನ್ನುವುದನ್ನು ಪರೋಕ್ಷವಾಗಿ ಉಲ್ಲೇಖೀಸಿದರು. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಕಾರ್ಯಕರ್ತರು ಶ್ರಮಿಸಿದ ಪರಂಪರೆ ಇದೆ ಎಂದರು.

ಬ್ಯಾಂಕರ್‌ ಗಳ ಸ್ಮರಣೆ
ಮಹಾನುಭಾವರಾದ ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಕ ಡಾ| ಟಿ.ಎಂ.ಎ.ಪೈ, ಕೆನರಾ ಬ್ಯಾಂಕ್‌ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್‌ ಪೈ, ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಹಾಜಿ ಅಬ್ದುಲ್ಲಾ, ವಿಜಯ ಬ್ಯಾಂಕ್‌ ಸ್ಥಾಪಕ ಎ.ಬಿ.ಶೆಟ್ಟಿಯವರು ಬ್ಯಾಂಕಿಂಗ್‌ ಕ್ಷೇತ್ರದ ಮೂಲಕ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಕರಾವಳಿಯ ನಾಡು ದೇಗುಲಗಳ ನಗರಿ (ಲ್ಯಾಂಡ್‌ ಆಫ್ ಟೆಂಪಲ್ಸ್‌) ಜತೆಗೆ ಬ್ಯಾಂಕ್‌ಗಳ ತವರೂರು (ಲ್ಯಾಂಡ್‌ ಆಫ್ ಬ್ಯಾಂಕಿಂಗ್‌) .

ಈ ನೆಲದವನ ಹಿರಿಮೆ
ಆಸ್ಟ್ರೇಲಿಯಾದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗಳಿಸಿದ ಕುಂದಾಪುರದ ಗುರುರಾಜ ಪೂಜಾರಿ ಈ ಜಿಲ್ಲೆಯವರು. ಈ ಮೂಲಕ ಹಿಂದೂಸ್ಥಾನದ ಹೆಸರು ಜಗತ್ತಿನಾದ್ಯಂತ ಪ್ರಜ್ವಲಿಸುವಂತೆ ಮಾಡಿದರು.

ಮೂರು ಸಭೆ ಹಲವು ಆದ್ಯತೆ
ರಾಜ್ಯ ವಿಧಾನಸಭೆಯ ಪ್ರಚಾರದ ಅಖಾಡಕ್ಕೆ ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಳಿದದ್ದು ಮಂಗಳವಾರ. ಒಟ್ಟು ಮೂರು ಬಹಿರಂಗ ಸಭೆ. ಉಳಿದಂತೆ ಎಲ್ಲೂ ಮಠ-ಮಂದಿರಗಳಿಗೆ ಭೇಟಿ ಇಲ್ಲ. ಮೂರೂ ಸಭೆಗಳ ಭಾಷಣಗಳಲ್ಲಿ ಆದ್ಯತೆ ನೀಡಿದ್ದೇ ಬೇರೆ. ಮೂರರಲ್ಲೂ ಕಂಡುಬಂದ ಸಾಮಾನ್ಯ ಅಂಶವೆಂದರೆ ಕನ್ನಡದ ಮುನ್ನುಡಿ. ಭಾಷಣ ಆರಂಭಿಸಿದ್ದು ಕನ್ನಡದಲ್ಲೇ. ಜತೆಗೆ ಮೂರು ಭೌಗೋಳಿಕ ಪ್ರದೇಶಗಳ ಸಂತರ, ಮಹಾತ್ಮರ ಹೆಸರನ್ನು ಉಲ್ಲೇಖೀಸಲು ಮರೆಯಲಿಲ್ಲ. ಅದರಂತೆಯೇ ಚಾಮರಾಜನಗರದಲ್ಲಿ ಮಂಟೇಸ್ವಾಮಿ, ಉಡುಪಿಯಲ್ಲಿ ಮಧ್ವಾಚಾರ್ಯ, ಕನಕದಾಸ, ಚಿಕ್ಕೋಡಿಯಲ್ಲಿ ಸವದತ್ತಿ ಯಲ್ಲಮ್ಮ, ಬಸವೇಶ್ವರರ ಸ್ಮರಣೆ

ಸಂತೇಮರಹಳ್ಳಿಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಮೊದಲ ಸಭೆ. ಅಲ್ಲಿ ಆದ್ಯತೆ ನೀಡಿದ್ದು ಅಭಿವೃದ್ಧಿ. ವಿದ್ಯುತ್‌ ವಂಚಿತ ಗ್ರಾಮಗಳಿಗೆ ವಿದ್ಯುತ್‌ ನೀಡಿದ್ದೇವೆ. ಇನ್ನು ಎಲ್ಲ ಮನೆಗಳಿಗೂ ವಿದ್ಯುತ್‌ ನೀಡುತ್ತೇವೆ ಎನ್ನುವುದು ಪ್ರಧಾನ ಅಂಶ. ಉಳಿದಂತೆ ಸಿದ್ದು ಸರಕಾರ ಮತ್ತು ರಾಹುಲ್‌ಗೆ ಟಾಂಗ್‌ ನೀಡಿದ್ದು ಇದ್ದದ್ದೆ.

ಉಡುಪಿ : ಇಲ್ಲಿನ ವೇದಿಕೆ ಹೆಚ್ಚು ಬಳಕೆಯಾಗಿದ್ದು ಹಿಂಸಾ ರಾಜಕೀಯವನ್ನು ಖಂಡಿಸುವುದಕ್ಕಾಗಿ. ಜತೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರ ಸ್ವಾವಲಂಬನೆ ಹಾಗೂ ಶಿಕ್ಷಣದ ಒಲವಿನತ್ತ ಪ್ರಶಂಸೆ. ದೇಶದ ಅಭಿವೃದ್ಧಿಗೆ ಬ್ಯಾಂಕಿಂಗ್‌ ಕ್ಷೇತ್ರದ ಕೊಡುಗೆ ಲೋಕಲ್‌ ಲಿಂಕ್‌. ತುಳುವಿನಲ್ಲೂ ಭಾಷಣ ಆರಂಭಿಸಿದ್ದು ವಿಶೇಷ.

ಚಿಕ್ಕೋಡಿ: ಇಲ್ಲಂತೂ ಮೋದಿಯವರು ರೈತರ ಅಭಿವೃದ್ಧಿ ಹೊರತುಪಡಿಸಿದಂತೆ ಮಾತನಾಡಿದ್ದು ಕಡಿಮೆ. ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಗುಣಗಾನ ಹಾಗೂ ದಲಿತ ಜನಾಂಗದವರನ್ನು ರಾಷ್ಟ್ರಪತಿ ಹುದ್ದೇಗೇರಿಸದ ಕಾಂಗ್ರೆಸ್‌ ಎಂದು ಟೀಕೆ.

ದೇವೇಗೌಡರಿಗೆ ಹೊಗಳಿಕೆೆ ರಾಹುಲ್‌ಗೆ ತೆಗಳಿಕೆ
ಸಭೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರನ್ನು ಹೊಗಳಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ತೆಗಳಿದರು. ದೇವೇಗೌಡರು ದೇಶದ ಮಾಜಿ ಪ್ರಧಾನಿ, ಹಿರಿಯರು. ಅವರು ನನ್ನ ಮನೆಗೆ ಬಂದಾಗ ನಾನು ಕಾರಿನ ಬಾಗಿಲು ತೆಗೆದು ಸ್ವಾಗತಿಸುತ್ತೇನೆ. ಹೋಗುವಾಗ ಕಾರಿನ ಬಾಗಿಲು ತೆರೆದು ಕುಳ್ಳಿರಿಸುತ್ತೇನೆ. ಅವರು ನಮ್ಮ ದೇಶ ಕಂಡ ಹಿರಿಯ ನಾಯಕರು. ಆದರೆ ಹಿರಿಯರಿಗೆ ಗೌರವ ಕೊಡುವ ಕ್ರಮವೂ ರಾಹುಲ್‌ಗೆ ಗೊತ್ತಿಲ್ಲ. ಗೌಡರ ಅನುಭವ ಎಷ್ಟು? ರಾಹುಲ್‌ ಸಾರ್ವಜನಿಕ ಜೀವನ ಎಷ್ಟು ವರ್ಷದ್ದು? ಇವರಿಂದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಆಗಲಿದೆ.

ದ್ವಾರಕೆಯಿಂದ ಬಂದ ಕೃಷ್ಣ
ಉಡುಪಿಯ ಬಾಲಕೃಷ್ಣ ದ್ವಾರಕೆಯಿಂದ ಬಂದವ (ದ್ವಾರಕಾನಾಥ). ಉಡುಪಿಗೆ ಬಂದ ನಾಥ ಸ್ವಾಭಾ ವಿಕ ನಾಥ. ಕನಕದಾಸರಿಗೆ ದರ್ಶನ ಕೊಟ್ಟವ. ಮಧ್ವಾಚಾರ್ಯರ ಮೂಲಕ ಪೂಜೆಗೊಂಡ ನಾಥ. ಇಂಥ ಮಠ, ಮಂದಿರ, ಗುರುಗಳು ದೇಶ- ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ.

ಪರಶುರಾಮ ಸೃಷ್ಟಿ- ಪರಿಸರಪ್ರೇಮ
ಪರಶುರಾಮ ಸೃಷ್ಟಿಯ ಹಿನ್ನೆಲೆಯಲ್ಲಿಯೂ ಪ್ರಕೃತಿ ರಕ್ಷಣೆ, ಪ್ರಕೃತಿ ಸಂವೇದನೆ, ಸಹಜೀವನವಿದೆ. ಇದುವೇ ಸಂದೇಶ. ನಮ್ಮದು ಪ್ರಕೃತಿ ಪೋಷಣೆಯ  ಸಂಸ್ಕೃತಿ, ಪ್ರಕೃತಿ ಶೋಷಣೆ ಸಂಸ್ಕೃತಿ ಅಲ್ಲ ಎಂದು ನಾವು ಜಗ ತ್ತಿನೆದುರು ಗರ್ವದಿಂದ ಹೇಳಬಹುದಾಗಿದೆ.

ಪರೀಕ್ಷೆ ಫ‌ಲಿತಾಂಶಕ್ಕೆ ಅಭಿನಂದನೆ
ಕರಾವಳಿಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫ‌ಲಿತಾಂಶ ಪಡೆಯುತ್ತಾರೆ. ಇವರು ಕಲಿಯುವುದರಲ್ಲಿ ಬುದ್ಧಿವಂತರು ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ. ಆದರೆ ಇವರ ಶ್ರಮವನ್ನು ಅರ್ಥ ಮಾಡಿಕೊಂಡು ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಲು ಪ್ರಯತ್ನಿಸಬೇಕು. ಉದ್ಯೋಗಕ್ಕಾಗಿ ತಮ್ಮ ವೃದ್ಧ ತಂದೆ-ತಾಯಿಯನ್ನು ಇಲ್ಲಿಯೇ ಬಿಟ್ಟು ನಗರಗಳನ್ನು ಸುತ್ತುವುದನ್ನು ತಡೆಯಬೇಕು. ಅದನ್ಯಾವುದೂ ಕಾಂಗ್ರೆಸ್‌ ಸರಕಾರ ಮಾಡಲಿಲ್ಲ.

ವಿಶಾಲ್‌ ಜನಸಾಗರ್‌
ಇಷ್ಟು ದೊಡ್ಡ ಪೆಂಡಾಲ್‌ನಲ್ಲಿ ವಿಶಾಲ ಜನಸಾಗರವೇ ಸೇರಿದೆ (ವಿಶಾಲ್‌ ಜನಸಾಗರ್‌). ಈ ಬಿಸಿಲಿನಲ್ಲಿ ನೀವು ನಡೆಸಿದ ತಪಸ್ಸು (ತಾಪ್‌ ಮೇ ತಪಸ್ಯಾ) ವ್ಯರ್ಥವಾಗುವುದಿಲ್ಲ, ಸಮಯ ಬೇಕಷ್ಟೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago