Featured

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು

ಮಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜು ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದೆ. ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಅಧಿಕೃತ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 12ರಂದು ಕೆಲವು ವಿದ್ಯಾರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಮುಂದೂಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದ್ದು, ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಸರ್ಕಾರ ಘೋಷಿಸಿರುವ ಯಾವುದೇ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿರಲಿಲ್ಲ ಎಂದು ತಿಳಿಸಿದೆ.

ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಸೆಪ್ಟೆಂಬರ್ 11ರಂದು ಎಲ್ಲ ವಿದ್ಯಾರ್ಥಿಗಳಿಗೆ ಪ್ರಕಟಿಸಲಾಗಿತ್ತು. ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು, ಸ್ಪಷ್ಟೀಕರಣ ಪಡೆಯಲು ಅಥವಾ ಅಗತ್ಯ ಬದಲಾವಣೆಗಳನ್ನು ಸೂಚಿಸಲು ವಿದ್ಯಾರ್ಥಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಪರೀಕ್ಷಾ ದಿನಾಂಕಗಳನ್ನು ಬದಲಾಯಿಸುವಂತೆ ಯಾವುದೇ ಆಕ್ಷೇಪಣೆ ಅಥವಾ ಮನವಿ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 26ರಂದು ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು ಎಂದು ಕಾಲೇಜು ತಿಳಿಸಿದೆ.

ಪಠ್ಯಕ್ರಮದ ಭಾಗವಾಗಿ ಈಗಾಗಲೇ ಯೋಜಿಸಲಾಗಿದ್ದ ಇಂಟರ್ನ್‌ಶಿಪ್ ಹಾಗೂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿಯನ್ನು ರೂಪಿಸಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಪರೀಕ್ಷೆಗಳನ್ನು ಮುಂದೂಡುವಂತೆ ಪ್ರತಿಭಟನೆ ನಡೆಯಲಿರುವ ಕುರಿತು ಅಕ್ಟೋಬರ್ 11ರಂದು ಭಾನುವಾರ ಬೆಳಗ್ಗೆ 11.36ಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಕಾಲೇಜಿಗೆ ಮೊದಲ ಬಾರಿಗೆ ಮಾಹಿತಿ ಲಭಿಸಿತ್ತು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು ಆಡಳಿತವು ಪೊಲೀಸ್ ಆಯುಕ್ತರ ಕಚೇರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 12ರಂದು ಕಾಲೇಜು ಆಡಳಿತಕ್ಕೆ ಯಾವುದೇ ಪೂರ್ವಭಾವಿ ಅಧಿಕೃತ ಮಾಹಿತಿ ನೀಡದೆ ಅಥವಾ ಲಿಖಿತ ಮನವಿ ಸಲ್ಲಿಸದೆ ಕೆಲವು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ ಕಾಲೇಜಿನ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು ಆಡಳಿತ ಮಂಡಳಿ ಹೇಳಿದೆ.

ಆದರೆ, ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಆತಂಕಗಳನ್ನು ಪರಿಗಣಿಸಿ ಹಾಗೂ ಕಾಲೇಜಿನಲ್ಲಿ ಸೌಹಾರ್ದಯುತ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಪ್ರತಿಭಟನೆಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರೂ, ಅವರ ಕಳವಳಗಳಿಗೆ ಸಂವಾದ, ಪರಸ್ಪರ ತಿಳುವಳಿಕೆ ಮತ್ತು ಸೌಹಾರ್ದದ ಮನೋಭಾವದಿಂದ ಸ್ಪಂದಿಸಲಾಗಿದೆ ಎಂದು ಕಾಲೇಜು ಸ್ಪಷ್ಟಪಡಿಸಿದೆ.

ಕಾಲೇಜಿನ ಎಲ್ಲ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಶೈಕ್ಷಣಿಕ ಅಗತ್ಯಗಳು, ಸಂಸ್ಥೆಯ ನಿಯಮಾವಳಿಗಳು ಹಾಗೂ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳ ನಿರ್ದೇಶನಗಳಿಗೆ ಅನುಗುಣವಾಗಿಯೇ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೈಂಟ್ ಆಗ್ನೆಸ್ ಕಾಲೇಜು ಜಾತ್ಯತೀತತೆ, ಸಮಾನತೆ, ಎಲ್ಲರನ್ನೂ ಒಳಗೊಳ್ಳುವ ಮನೋಭಾವ, ಧಾರ್ಮಿಕ ಸಾಮರಸ್ಯ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಈ ಮೌಲ್ಯಗಳು ಸಂಸ್ಥೆಯ ಶೈಕ್ಷಣಿಕ ಧ್ಯೇಯ ಮತ್ತು ಆಡಳಿತಾತ್ಮಕ ಕಾರ್ಯವೈಖರಿಯ ಮೂಲಾಧಾರಗಳಾಗಿವೆ ಎಂದು ಕಾಲೇಜು ಹೇಳಿದೆ.

ವಿದ್ಯಾರ್ಥಿಗಳ ನ್ಯಾಯಸಮ್ಮತ ಕಳವಳಗಳಿಗೆ ಸ್ಪಂದಿಸಲು ಕಾಲೇಜು ಸದಾ ಮುಕ್ತವಾಗಿದೆ. ಅದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಸಂಸ್ಥೆಯ ನಿಯಮಗಳು ಹಾಗೂ ಕಾರ್ಯವಿಧಾನಗಳನ್ನು ಗೌರವಿಸಿ ಶಿಸ್ತು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಿರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಅಶಿಸ್ತಿನ ವರ್ತನೆ, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನ ಅಥವಾ ಕಾಲೇಜು ಆವರಣದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಕಾಲಿಕ ನೆರವು, ಸಹಕಾರ ಹಾಗೂ ಬೆಂಬಲ ನೀಡಿದ ಜಿಲ್ಲಾಡಳಿತ, ಪೊಲೀಸ್ ಆಯುಕ್ತರು, ಪೊಲೀಸ್ ಸಿಬ್ಬಂದಿ ಮತ್ತು ಪೋಷಕರ ಸಂಘದ ಸದಸ್ಯರಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.

Vishwa News 24

Recent Posts

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

21 minutes ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

31 minutes ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

44 minutes ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

1 day ago

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ  ಸಂಭ್ರಮದ ನಡುವೆಯೇ…

1 day ago

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ  – vishwanews24

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ   ಮಂಗಳೂರು:…

1 day ago