Featured

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಬೇಕಾಗಿದ್ದ ಶಂಕಿತ ಉಗ್ರನೂ ಸೇರಿ ಹಲವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಾಸ್‌ಪೋರ್ಟ್ ನವೀಕರಿಸಲು ನೆರವು ನೀಡಿದ ಆರೋಪ ಎದುರಿಸುತ್ತಿರುವ ಅಂಗವಿಕಲ ಟ್ರಾವೆಲ್ ಏಜೆಂಟ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ಅಂಗವಿಕಲತೆ ಅಥವಾ ಅನಾರೋಗ್ಯದ ಕಾರಣಗಳನ್ನು ನೀಡಿ ಆರೋಪಿಯು ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಜತೆಗೆ, ಅರ್ಜಿದಾರನ ಏಜೆನ್ಸಿಯಿಂದ ಸುಮಾರು 15 ಬೇರೆ ಬೇರೆ ಪಾಸ್‌ಪೋರ್ಟ್ ಅರ್ಜಿಗಳಿಗೆ ಒಂದೇ ವಿಳಾಸ ನೀಡಲಾಗಿದ್ದರೂ ಅವುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸದ ಪೊಲೀಸ್ ಕಾನ್‌ಸ್ಟೆಬಲ್ ಕಾರ್ಯವೈಖರಿಯನ್ನೂ ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಂಗಳೂರಿನ ಯು ಎಂ ಹೈದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಅರ್ಜಿದಾರರು ಹೊಂದಿರುವ ಅಂಗವೈಕಲ್ಯ ಅಥವಾ ಆರೋಗ್ಯದ ಸಮಸ್ಯೆಗಳು ಮಾನವೀಯ ನೆಲೆಯಲ್ಲಿ ಸಹಾನುಭೂತಿಗೆ ಅರ್ಹವಾಗಿದ್ದರೂ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯಗಳ ತನಿಖೆಯನ್ನು ತಡೆಯಲು ಇವು ಕಾರಣವಾಗಲಾರವು. ಅರ್ಜಿದಾರರು ಪೂರ್ಣಪ್ರಮಾಣದ ವಿಚಾರಣೆಯನ್ನು ಎದುರಿಸಿ ತಮ್ಮನ್ನು ನಿರಪರಾಧಿ ಎಂದು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಟ್ರಾವೆಲ್ ಏಜೆಂಟ್ ಆಗಿರುವ ಅರ್ಜಿದಾರರು ತಾವು ಕೇವಲ ಕ್ಲೆರಿಕಲ್ ಕೆಲಸ ಅಥವಾ ಸಾಮಾನ್ಯ ಸಹಾಯ ಮಾಡಿರುವುದಾಗಿ ಹೇಳಲು ಸಾಧ್ಯವಿಲ್ಲ. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗೆ ಪಾಸ್‌ಪೋರ್ಟ್ ಪಡೆಯಲು ನಕಲಿ ವಿಳಾಸ ಹಾಗೂ ದಾಖಲೆಗಳನ್ನು ನೀಡಿರುವುದು ಸಾಬೀತಾದರೆ, ಅದು ಕೇವಲ ಕ್ರಿಮಿನಲ್ ಅಪರಾಧವಾಗುವುದಿಲ್ಲ. ಬದಲಿಗೆ ರಾಷ್ಟ್ರದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರುವ ಗಂಭೀರ ಕೃತ್ಯವಾಗಲಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.

ಅರ್ಜಿದಾರ ಹೈದರ್ ಅವರ ಟ್ರಾವೆಲ್ ಏಜೆನ್ಸಿಯಿಂದ ಸಲ್ಲಿಕೆಯಾಗಿದ್ದ ಸುಮಾರು 15 ಪಾಸ್‌ಪೋರ್ಟ್ ಅರ್ಜಿಗಳಿಗೆ ಒಂದೇ ವಿಳಾಸ ನೀಡಲಾಗಿದ್ದರೂ, ಸೂಕ್ತ ಸ್ಥಳ ಪರಿಶೀಲನೆ ನಡೆಸದೆ ಅನುಮೋದನೆ ನೀಡಿದ್ದ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ್ ಅವರ ನಡೆ ತೀವ್ರ ಆಘಾತಕಾರಿಯಾಗಿದೆ. ಇದು ಕೇವಲ ಕರ್ತವ್ಯ ಲೋಪವಲ್ಲ, ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹವಾಗಿದೆ. ಅವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.

“ಪಾಸ್‌ಪೋರ್ಟ್‌ ಪ್ರಕ್ರಿಯೆಯ ಭಾಗವಾಗಿ ಪರಿಶೀಲನೆ ನಡೆಸಿದ್ದ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಈಗಾಗಲೇ ಅನುಮತಿ ಕೋರಲಾಗಿದ್ದು, ಸದ್ಯ ಪ್ರಸ್ತಾವನೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ಆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶೀಘ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು” ಎಂದು ಆದೇಶಿಸಿರುವ ಹೈಕೋರ್ಟ್, “ರಾಷ್ಟ್ರದ ವಿರುದ್ಧ ನೇರವಾಗಿ ಅಪರಾಧ ಎಸಗುವವರು ಮಾತ್ರವಲ್ಲ, ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾಗುವ ಅಥವಾ ಬೇಜವಾಬ್ದಾರಿತನ ತೋರುವ ಪ್ರತಿಯೊಬ್ಬರೂ ಕಾನೂನಿನ ವ್ಯಾಪ್ತಿಗೆ ಬರಬೇಕು ಎಂಬ ಕಠಿಣ ಸಂದೇಶ ರವಾನಿಸಿದೆ.

ಪ್ರಕರಣದ ಹಿನ್ನೆಲೆ: ಪುತ್ತೂರು ತಾಲೂಕಿನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಯು.ಎಂ. ಹೈದರ್ ವಿರುದ್ಧ ಆಂಧ್ರಪ್ರದೇಶದ ಎಟಿಎಸ್‌ನಿಂದ ಹುಡುಕಲ್ಪಡುತ್ತಿದ್ದ ಮೋಸ್ಟ್ ವಾಂಟೆಡ್ ಉಗ್ರ ಇಬ್ರಾಹಿಂ ಖಲೀಲ್ ಸೇರಿ ಸುಮಾರು 15 ಮಂದಿಗೆ ಮಂಗಳೂರಿನಲ್ಲಿ ನಕಲಿ ವಾಸ್ತವ್ಯದ ದಾಖಲೆಗಳು ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸೃಷ್ಟಿಸಲು ಸಹಕರಿಸಿದ್ದಲ್ಲದೆ, ಪೊಲೀಸರಿಗೆ ವಂಚಿಸಿ ತಪಾಸಣೆ ಯಶಸ್ವಿಯಾಗುವಂತೆ ಮಾಡಲು ಸಂಚು ರೂಪಿಸಿದ ಆರೋಪವಿದೆ.

ಅರ್ಜಿದಾರರ ಏಜೆನ್ಸಿಯಿಂದ ಸೃಷ್ಟಿಸಲಾಗಿದೆ ಎನ್ನಲಾದ ನಕಲಿ ದಾಖಲೆಗಳ ಆಧಾರದಲ್ಲಿ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಯಿಂದ ಪಾಸ್‌ಪೋರ್ಟ್ ಪಡೆಯಲಾಗಿತ್ತು. ಈ ಆರೋಪದ ಸಂಬಂಧ ತನಿಖೆ ನಡೆಸಿದ್ದ ಮಂಗಳೂರು ಪೂರ್ವ ಠಾಣೆ ಪೊಲೀಸರು ಅರ್ಜಿದಾರ ಹೈದರ್ (ಎ3), ಶಂಕಿತ ಉಗ್ರ ಇಬ್ರಾಹಿಂ ಖಲೀಲ್ (ಎ1) ಸೇರಿ ಹಲವರ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಹೈದರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

2 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

3 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

4 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

4 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

4 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

5 hours ago