ಇಸ್ಲಾಮಾಬಾದ್: ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾಕ್ಕೆ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ರದ್ದು ಮಾಡಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ವಾರ್ಷಿಕವಾಗಿ 450 ಕೋಟಿ ಪಾಕ್ ರೂಪಾಯಿಗಳು ಉಳಿತಾಯವಾಗಲಿದೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಜ್ ಯಾತ್ರಿಗಳಿಗೆ ಸಬ್ಸಿಡಿ ನೀಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇದೆಯೆ ಅಥವಾ ಇಲ್ಲವೆ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು ಎಂದು ಧಾರ್ವಿುಕ ಸಚಿವ ನೂರುಲ್ ಹಕ್ ಖಾದ್ರಿ ತಿಳಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಪಿಎಂಎಲ್-ಎನ್ ಪಕ್ಷ ಸರ್ಕಾರಿ ಕೋಟಾದಲ್ಲಿ ಹಜ್ ಯಾತ್ರೆ ಕೈಗೊಳ್ಳುವವರಿಗೆ 42 ಸಾವಿರ ರೂ. ಸಬ್ಸಿಡಿ ನೀಡುತ್ತಿತ್ತು.
ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬರೂ ನಿಭಾಯಿಸಬೇಕಾದ ಐದು ಪ್ರಮುಖ ಕರ್ತವ್ಯಗಳ ಪೈಕಿ ಹಜ್ ಯಾತ್ರೆ ಕೂಡ ಒಂದು. ಇಸ್ಲಾಂನ ಪ್ರಮುಖ ಸ್ತಂಭಗಳಲ್ಲಿ ಹಜ್ ಯಾತ್ರೆಗೆ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ಮುಸಲ್ಮಾನ ನಮಾಜ್ ಮತ್ತು ರೋಜಾವನ್ನು ಕಡ್ಡಾಯವಾಗಿ ಕೈಗೊಳ್ಳುವಂತೆಯೇ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಬೇಕು. ಪ್ರಯಾಣ, ವಸತಿ, ಆಹಾರದ ಖರ್ಚನ್ನು ಯಾತ್ರಿಕರು ಸ್ವಂತವಾಗಿ ಭರಿಸಬೇಕು ಎಂಬ ಉಲ್ಲೇಖ ಕುರಾನ್ನಲ್ಲಿ ಇದೆ ಎಂಬುದು ಇಸ್ಲಾಂ ಧಾರ್ವಿುಕ ಮುಖಂಡರ ಅಭಿಪ್ರಾಯ.