ಬಂಟ್ವಾಳ: ದಸರಾ ಬಂತೆಂದರೆ ಸಾಕು, ಮನೆ ಮನೆಗೆ ಬರುವ ಹುಲಿವೇಷದ ಕುಣಿತ, ಮಕ್ಕಳ ಸಂಭ್ರಮ, ಕೈತುಂಬಾ ಸಿಗುವ ಹಣ. ಇದೇ ಈ ಪುಟಾಣಿಗಳ ಪ್ರತಿವರ್ಷದ ಖುಷಿ. ಆದರೆ ಈ ಬಾರಿ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಏಳು ಪುಟಾಣಿ ಮಕ್ಕಳು ಮಾಡಿದ್ದೇ ಬೇರೆ. ಶಾರ್ದೂಲ ವೇಷ ಧರಿಸಿ ಮನೆ ಮನೆಗೆ ತೆರಳಿ ಸಂಗ್ರಹಿಸಿದ ಹಣವನ್ನು ತಮ್ಮ ಖುಷಿಗಾಗಿ ಬಳಸಿಕೊಳ್ಳುವ ಬದಲು, ಕಳೆದ ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ತಮ್ಮೂರಿನ ಯುವಕನ ನೆರವಿಗೆ ನೀಡಿದ್ದಾರೆ. ತಾವಾಯಿತು, ತಮ್ಮ ಸಂಭ್ರಮವಾಯಿತು ಎನ್ನುವ ವಯಸ್ಸಿನಲ್ಲೇ ಪರರ ನೋವಿಗೆ ಮಿಡಿದ ಈ ಪುಟಾಣಿಗಳ ಮಾನವೀಯ ಕಾರ್ಯಕ್ಕೆ ಇದೀಗ ಇಡೀ ಗ್ರಾಮವೇ ಫಿದಾ ಆಗಿದೆ.
ಇದು ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ. ಅಲ್ಲಿನ ಪ್ರಾಥಮಿಕ ಶಾಲೆಯ ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಘ್ ಹಾಗೂ ರಿತೇಶ್ ಅನ್ನೋ 7 ಪುಟಾಣಿ ಮಕ್ಕಳು ದಸರಾ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶಾರ್ದೂಲ (ಹುಲಿ) ವೇಷ ಧರಿಸಿ ತಮ್ಮ ಊರಿನ ಜನರ ಮನೆ ಮನೆಗೆ ಭೇಟಿ ನೀಡುತ್ತಾರೆ. ಪ್ರತಿ ಬಾರಿ ತಮ್ಮದೇ ಕುಟುಂಬಸ್ಥರ ಮನೆಗಳಿಗೆ ಹೋಗಿ ಬರುತ್ತಿದ್ದ ಮಕ್ಕಳಿಗೆ ಸುಮಾರು 600 ರೂಪಾಯಿ ಸಂಗ್ರಹವಾಗುತ್ತಿತ್ತು. ಆ ಹಣವನ್ನು ಸ್ನೇಹಿತರೆಲ್ಲಾ ಸೇರಿ ಹಂಚಿಕೊಂಡು ತಿಂಡಿ-ತಿನಿಸು ತಿಂದು ಶಾಲಾ ರಜೆಯನ್ನು ಆನಂದಿಸುತ್ತಿದ್ದರು. ಆದ್ರೆ ಈ ಬಾರಿ ಮಾತ್ರ ಈ ಪುಟಾಣಿಗಳು ಮಾಡಿದ ಸೇವೆಗೆ ಇಡೀ ಗ್ರಾಮವೇ ಶ್ಲಾಘನೆ ವ್ಯಕ್ತಪಡಿಸಿದೆ.
ಈ ಬಾರಿ ಪುಟಾಣಿಗಳು ಸೇರಿ ಪ್ರತಿವರ್ಷದಂತೆ ತಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಶಾರ್ದೂಲ ವೇಷ ಧರಿಸಿ ಊರಿನ ಮನೆ ಮನೆಗೆ ಭೇಟಿ ನೀಡಿದ್ದಾರೆ. ಆದ್ರೆ ಎಂದಿಗಿಂತಲೂ ಹೆಚ್ಚಾಗಿ ಈ ಬಾರಿ ಊರಿನ ಜನರಿಂದ ಈ ಪುಟಾಣಿಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಸರಿಸುಮಾರು 5 ಸಾವಿರದ ೪೦೦ ರೂಪಾಯಿ ಹಣ ಸಂಗ್ರಹವಾಗಿತ್ತು. ಆದ್ರೆ ಎಂದಿನಂತೆ ಈ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳದ ಪುಟಾಣಿಗಳು, ಸಮಾಜಸೇವೆಗೆ ವಿನಿಯೋಗಿಸಲು ನಿರ್ಧರಿಸಿದ್ದರು. ಅಪಘಾತದಿಂದಾಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ತಮ್ಮದೇ ಊರಿನ ಯುವಕನ ನೆರವಿಗೆ ನಿಂತು, ಸಂಗ್ರಹವಾದ ಸಂಪೂರ್ಣ ಹಣವನ್ನು ಆತನಿಗೆ ತಲುಪಿಸಿದ್ದಾರೆ.ಇನ್ನು ಈ ವಿಚಾರವನ್ನು ಯಾರ ಗಮನಕ್ಕೂ ತರದೆ ತಾವೇ ಖುದ್ದಾಗಿ ಹಣ ನೀಡಿ ಬಂದಿದ್ದರು. ಬಳಿಕ ಇವರ ಈ ಮಾನವೀಯ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗಷ್ಟೇ ಪೋಷಕರಿಗೂ ವಿಷಯ ತಿಳಿದಿದ್ದು, ಮಕ್ಕಳ ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಒಟ್ಟಿನಲ್ಲಿ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅನ್ನೋದಕ್ಕೆ ಈ ಏಳು ಜನ ಪುಟಾಣಿಗಳೇ ಸಾಕ್ಷಿ. ತಮ್ಮ ಬಾಲ್ಯದ ಖುಷಿಯ ನಡುವೆಯೂ ಇನ್ನೊಬ್ಬರ ನೋವಿಗೆ ಸ್ಪಂದಿಸಿದ ಈ ಪುಟಾಣಿಗಳಿಗೆ ನಮ್ಮದೊಂದು ಸಲಾಂ.
ಮಂಗಳೂರು: ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದದ ಅನಾವರಣ; ಶ್ರೀದೇವಿಯ ವೇಷದಲ್ಲಿ ಕಂಗೊಳಿಸಿದ ಮುಸ್ಲಿಂ ಯುವತಿ ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಧಾರ್ಮಿಕ…
ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ ಮುಂಬೈ: ಬಾಲಿವುಡ್…
ಬೆಂಗಳೂರು – ಮುಂಬೈ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ ..! ಬೆಂಗಳೂರು:ಬೆಂಗಳೂರು ಮತ್ತು ಮುಂಬೈ…
ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣಕ್ಕೆ ತಿರುವು ; ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು ಮಂಗಳೂರು: ಸೋಮವಾರ ಬೋಳಿಯಾರ್…
ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದಕ್ಕೆ ಅದು ಆಟಿಕೆಯಲ್ಲ , ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ : ಕರ್ನಾಟಕ ಹೈಕೋರ್ಟ್…
ಮುಂಬೈ : ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಡ ; 3 ಮಕ್ಕಳು ಸೇರಿ 9 ಮಂದಿಗೆ ಗಾಯ ಮುಂಬೈ: ಇಲ್ಲಿನ…