ಬಾಗಲಕೋಟೆ : ಮಂಗಳೂರು ಗಲಭೆ ಕುರಿತ ವಿಡಿಯೋ ಪೊಲೀಸರ ಸೃಷ್ಠಿ ಎಂದು ಈ ಮೊದಲೇ ನಾನು ಹೇಳಿದ್ದೆ. ಅವರ ತಪ್ಪು ಮುಚ್ಚಿ ಹಾಕಿಕೊಳ್ಳಲು ವಿಡಿಯೋ ಸೃಷ್ಟಿ ಮಾಡಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮಂಗಳೂರು ಹಿಂಸಾಚಾರ ಕುರಿತು ಎಚ್​ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಹೊಸ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು,  ಹಿಂಸಾಚಾರ ಸೃಷ್ಟಿಸಿ ಪೊಲೀಸನವರು ತಪ್ಪು ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಪೊಲೀಸಿನವರೇ ವಿಡಿಯೋ ಮಾಡಿದ್ದಾರೆ. ಘಟನೆಯಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿಲ್ಲ ಎಂದರು.

ಇದೇ ವೇಳೆ ಬಿಜೆಪಿ ಮುಖಂಡರಿಗೆ ಅನುದಾನ ನೀಡಿರುವ ಕುರಿತು ಮಾತನಾಡಿದ ಅವರು, ಶಾಸಕರಿಗೆ ನೀಡಬೇಕಾದ ಅನುದಾನವನ್ನು ಬಿಜೆಪಿ ಮುಖಂಡರಿಗೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೆರೆ, ಮಳೆ ಹಾನಿ., ರಸ್ತೆ ದುರಸ್ಥಿ ಅನುದಾನ ಬಿಜೆಪಿ ಮುಖಂಡರಿಗೆ ಬಿಡುಗಡೆ ಮಾಡಲಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡದ ಕುರಿತು ಇದೇ ವೇಳೆ ಹರಿಹಾಯ್ದ ಅವರು, ಪರಿಹಾರ ನೀಡದ ಯಡಿಯೂರಪ್ಪ ಅವರಿಗೆ ಬಾಯಿಗೆ ಬಂದಂತೆ ಬಯ್ಯಬೇಕು. ತಹಶೀಲ್ದಾರ್​ಗೆ ನೀಡಬೇಕು ಎಂದರೆ, ಅವರು ಎಲ್ಲಿಂದ ನೀಡುತ್ತಾರೆ. ಸರ್ಕಾರ ಇದಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ಸಂತ್ರಸ್ತರಿಗೆ ತಿಳಿಸಿ ಹೇಳಿದರು.