ಬಂಟ್ವಾಳ,:ಇತಿಹಾಸಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ, ದುರ್ಗಾಪರಮೇಶ್ವರಿ ಮತ್ತು ಸಪರಿವಾರ ದೇವರುಗಳಿಗೆ ಮಾ.13ರ ಪ್ರಾತಃಕಾಲ 4ರಿಂದ ಮೀನ ಲಗ್ನ ಸಮುಹೂರ್ತದಲ್ಲಿ ಪುಣ್ಯಾಹ, ಗಣಹೋಮ ನಡೆಸಿ ಪೂರ್ವಾಹ್ನ 7.40ರಿಂದ 8.10ರ ಬ್ರಹ್ಮಕಲಶಾಭಿಷೇಕವು ವೈದಿಕ ವಿಧಿವಿಜ್ಞಾನದೊಂದಿಗೆ ಶಾಸ್ತ್ರೋಕ್ತವಾಗಿ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು ನೇತೃತ್ವದಲ್ಲಿ ನೆರವೇರಿಸಿದರು.
ಪೊಳಲಿಯ ಶ್ರೀರಾಜರಾಜೇಶ್ವರಿ ಹಾಗೂ ಪರಿವಾರ ದೇವರುಗಳು ಮೃಣ್ಮಮ ಮೂರ್ತಿಗಳಾಗಿವೆ. ಶ್ರೀರಾಜರಾಜೇಶ್ವರಿಯ ಮೃಣ್ಮಯ ಮೂರ್ತಿಯ ಎದುರು ಕಂಚಿನ ಅಭಿಮಾನಿ ಮೂರ್ತಿ ಇದ್ದು, ಮೃಣ್ಮಯ ಮೂರ್ತಿಯಿಂದ ಶಕ್ತಿ ಆಹಾವನೆ ನಡೆಸಿ ಕಂಚಿನ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ. ಬಳಿಕ ಶ್ರೀರಾಜರಾಜೇಶ್ಬರಿ ಮೃಣ್ಮಯ ಮೂರ್ತಿಯ ಎದುರಿರುವ ಕಂಚಿನ ಶ್ರೀರಾಜರಾಜೇಶ್ವರಿ ಅಭಿಮಾನಿ ಮೂರ್ತಿಗೆ ನಿರಂತರ ವಿವಿಧ ಬಗೆಯ ಕಲಶಾಭಿಷೇಕ ಶಾಸ್ತ್ರೋಕ್ತವಾಗಿ ಜರಗಿತು.
ಬೆಳಗ್ಗಿನಿಂದಲೇ ಭಕ್ತರದಂಡು ದೇವಳಕ್ಕೆ ಆಗಮಿಸಿದ್ದು, ಅಪರಾಹ್ನದ ವೇಳೆಗೆ ಕ್ಷೇತ್ರಕ್ಕೆ ಬಂದ ಭಕ್ತರ ಸಂಖ್ಯೆ ಸುಮಾರು ಒಂದೂವರೆಲಕ್ಷವನ್ನು ಮೀರಿತ್ತು. ಸಂಜೆಯ ಬಳಿಕವಂತೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದ ಭಕ್ತರು ರಾಜರಾಜೇಶ್ವರಿ ದೇವಿಯನ್ನು ಕಂಡು ಕಣ್ತುಂಬಿಕೊಂಡರು. ಯಾವುದೇ ರೀತಿಯ ನೂಕುನುಗ್ಗಲಾಗದಂತೆ ವಿವಿಧ ಸಮಿತಿಗಳು, ಸ್ವಯಂಸೇವಕರು ಶ್ರಮಿಸಿ, ಎಲ್ಲಾದಿನಗಳ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಬ್ರಹ್ಮಕಲಶೋತ್ಸವದ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿ, ದರ್ಶನ ಪಡೆದರು.