ಶಿವಮೊಗ್ಗ: ಮೇ 1ರಿಂದ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಇಂಡಿಗೋ ಏರ್ಲೈನ್ಸ್ ವಿಮಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಚಿವರಿಗೆ ಪತ್ರ ಬರೆದಿರುವ ಸಂಸದರು, ಯಶಸ್ವಿಯಾಗಿ ನಡೆಯುತ್ತಿರುವ ಬೆಂಗಳೂರು ಮತ್ತು ಶಿವಮೊಗ್ಗ ಮಾರ್ಗದ ವಿಮಾನಯಾನ ಸೇವೆ ಸ್ಥಗಿತಗೊಂಡಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಲಕ್ಷಾಂತರ ಜನರಿಗೆ ವಾಯು ಸಂಪರ್ಕದ ಅನುಕೂಲ ತಪ್ಪಲಿದೆ. ಇದು ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲೋಕಾರ್ಪಣೆಗೊಂಡ ನಂತರ, ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 2,400ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ನಿಲ್ದಾಣವು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಿದೆ. ಆದರೆ, ಪ್ರಸಕ್ತ ಹೊಸ ಹಾರಾಟ ಕರ್ತವ್ಯ ಸಮಯ ಮಿತಿ ನಿಯಮಗಳಿಂದ ಉಂಟಾಗಿರುವ ಪೈಲಟ್ ಕೊರತೆ ಹಾಗೂ ನವೀಕರಿಸದ ಏರ್ಲೈನ್ ಒಪ್ಪಂದದ ಕಾರಣಗಳನ್ನು ಮುಂದಿಟ್ಟು ಇಂಡಿಗೋ ಸಂಸ್ಥೆ ಈ ಮಾರ್ಗವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಇಂಡಿಗೋ ನಡುವಿನ ಮೂಲ ಒಪ್ಪಂದ ಆಗಸ್ಟ್ 2025ರಲ್ಲಿ ಮುಕ್ತಾಯವಾಗಿದ್ದು, ನಂತರವೂ ಕೂಡ ಇಂಡಿಗೋ ಸಂಸ್ಥೆ 6 ತಿಂಗಳ ಕಾಲ ಈ ಮಾರ್ಗದಲ್ಲಿ ವಿಮಾನಯಾನ ಮುಂದುವರೆಸಿತ್ತು. ಬದಲಾದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಜನರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರ ತುರ್ತಾಗಿ ಇಂಡಿಗೋ ಸಂಸ್ಥೆಯವರೊಂದಿಗೆ ಮಾತನಾಡಿ, ಒಪ್ಪಂದ ನವೀಕರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
ಅಲ್ಲದೇ, ಇಂಧನ ವೆಚ್ಚ ಮತ್ತು ಮಾರ್ಗ ದಟ್ಟಣೆ ಆಧಾರದ ಮೇಲೆ ಹಣಕಾಸು ಬೆಂಬಲ ಒಳಗೊಂಡ ಹೊಸ ಒಪ್ಪಂದ ರೂಪಿಸಬೇಕು. ಕನಿಷ್ಠ ಮುಂದಿನ ಎರಡು ವರ್ಷಗಳ ಅವಧಿಗೆ ಹಾಲಿ ಒಪ್ಪಂದ ನವೀಕರಿಸಬೇಕು. ಒಂದು ವೇಳೆ ಇಂಡಿಗೋ ಸಂಸ್ಥೆ ಹಿಂದೆ ಸರಿದರೆ ಬದಲಿ ಏರ್ಲೈನ್ಸ್ ಸಂಸ್ಥೆಗಳ ಸೇವೆ ನಿಯೋಜಿಸಬೇಕು ಹಾಗೂ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹಣಕಾಸು ಹೊರೆ ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ರಾತ್ರಿ ಇಳಿಯುವಿಕೆ ಸೌಲಭ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗುತ್ತಿರುವ ಹೊತ್ತಿನಲ್ಲೇ, ವಿಮಾನ ಸೇವೆ ನಿಲ್ಲುವುದು ಸಾರ್ವಜನಿಕರಿಗೆ ಅನುಕೂಲ ತಪ್ಪಿಸಿದಂತಾಗುತ್ತದೆ. ರಾತ್ರಿ ಲ್ಯಾಂಡಿಂಗ್ ಸೌಲಭ್ಯದ ಸಂಪೂರ್ಣ ಪ್ರಯೋಜನ, ಹೆಚ್ಚಿನ ಸೇವೆಗಳನ್ನು ಜನರಿಗೆ ತಲುಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯೂ ಆಗಿದೆ ಮತ್ತು ಹೂಡಿಕೆಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದಿದ್ದಾರೆ.
10,000ಕ್ಕೂ ಹೆಚ್ಚು ಕೈಗಾರಿಕೆಗಳು, ಜೋಗ ಜಲಪಾತ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು, ಮತ್ತು ಔಷಧೀಯ ಸಸ್ಯ, ಕೃಷಿ ಉದ್ಯಮ ಕ್ಷೇತ್ರಗಳನ್ನು ಒಳಗೊಂಡ ಮಲೆನಾಡಿಗೆ ವಾಯು ಸಂಪರ್ಕ ಕೇವಲ ಅನುಕೂಲದ ವಿಚಾರವಲ್ಲ, ಅದೊಂದು ಆರ್ಥಿಕ ಜೀವನಾಡಿಯಾಗಿದೆ. ಈ ನಿಟ್ಟಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಲೇ ಮಧ್ಯಪ್ರವೇಶಿಸಿ KSIIDC ಮೂಲಕ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ಸಂಸದರು ಒತ್ತಾಯಿಸಿದ್ದಾರೆ.
ಪ್ರಾದೇಶಿಕ ವಿಮಾನಯಾನವನ್ನು ಬಲಪಡಿಸುವ ರಾಜ್ಯ ಸರ್ಕಾರದ ಬದ್ಧತೆ ಹಾಗೂ ವಿಶ್ವಾಸಾರ್ಹತೆ ಕೂಡ ಇದರಲ್ಲಿ ಅಡಕವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆ ಸಾಧಿಸಿದ ಪ್ರಗತಿಯನ್ನು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕಿದೆ ಎಂದು ಸಂಸದರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಈ ಕುರಿತು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಾನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಾಕಷ್ಟು ಪ್ರಯತ್ನ ಮಾಡಿದೆವು. ಇಂಡಿಗೋ ಮ್ಯಾನೇಜ್ಮೆಂಟ್ ಬರೆದ ಪತ್ರದಲ್ಲಿ ವಿಮಾನ ಹಾಗೂ ಪೈಲೆಟ್ಗಳ ಕೊರತೆ ಅಂತ ಹೇಳಿದ್ದಾರೆ. ನನಗೆ ಸಿಕ್ಕ ಸುದ್ದಿ ಪ್ರಕಾರ, ಶಿವಮೊಗ್ಗ – ಬೆಂಗಳೂರು ಮಾರ್ಗ ಉಡಾನ್ ಯೋಜನೆಯಡಿ ಬರುವುದಿಲ್ಲ. ಆದರೆ, ಉಳಿದ ಮಾರ್ಗಗಳು ಉಡಾನ್ನಡಿ ಬರುತ್ತವೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿಮಾನಯಾನ ಸಂಸ್ಥೆಯವರನ್ನು ಒತ್ತಾಯ ಮಾಡಿಯೇ ಕರೆದುಕೊಂಡು ಬರಲಾಗಿದೆ. ಅಲ್ಲದೆ, ಇಂಡಿಗೋದವರಿಗೆ ಪ್ರತಿ ದಿನ ಪ್ರಯಾಣಿಕರ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಸೀಟು ಭರ್ತಿಯಾದರೆ ಶೇ.50ರಷ್ಟು ಸೀಟಿಗೆ ಪ್ರತಿ ಸೀಟಿಗೆ 500 ರೂ.ಗಳಂತೆ ಹಣ ನೀಡುವ ಒಪ್ಪಂದ ಆಗಿತ್ತು. ಒಪ್ಪಂದವು 2025ಕ್ಕೆ ಮುಕ್ತಾಯವಾಗಿದೆ. ಆದರೂ ಬಳಿಕ ಒಂದು ವರ್ಷ ಇಂಡಿಗೋ ವಿಮಾನಗಳು ಹಾರಾಟ ಮಾಡಿವೆ. ಇದರ ಕುರಿತು ನಾನು ಸಚಿವರಾದ ಎಂ.ಬಿ.ಪಾಟೀಲರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಅವರು ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೂ ಸಹ ಫೋನ್ನಲ್ಲಿ 10 ನಿಮಿಷ ಮಾತನಾಡಿದ್ದೇನೆ ಎಂದರು.
ಹಿಂದೆ ಯಡಿಯೂರಪ್ಪನವರು ಬೀದರ್ನಿಂದ ಬೆಂಗಳೂರು ಇಂಡಿಗೋ ವಿಮಾನ ಮಾರ್ಗಕ್ಕೆ ಹಣ ನೀಡಿದ್ದರು ಎಂಬ ಸುದ್ದಿ ಇದೆ. ನಾನು ಸಚಿವ ಎಂ.ಬಿ.ಪಾಟೀಲರಿಗೆ ಕೇಳಿದೆ, ಅವರು ಹಣ ಹೇಗೆ ನೀಡುವುದು ಎಂದು ಕೇಳಿದರು. ನಾನು ಹಳೇ ಅಗ್ರಿಮ್ಮೆಂಟ್ ಇದೆ, ಅದನ್ನು ಮುಂದುವರೆಸಿ ಎಂದು ಮನವಿ ಮಾಡಿದ್ದೇನೆ. ಏನಾಗುತ್ತದೆ ಎಂದು ನೋಡೋಣ. ನೈಟ್ ಲ್ಯಾಡಿಂಗ್ ವ್ಯವಸ್ಥೆ ನಿಧಾನವಾಗುತ್ತಿದೆ. ಅಲ್ಲದೇ ವಿಮಾನ ಬಂದು ವಾಪಸ್ ಹೋಗಿರುವ ಉದಾಹರಣೆ ಸಹ ಇದೆ. ಆದರೂ ಸಹ ಕೇಂದ್ರದಿಂದ ವಿಮಾನಯಾನ ಸಂಸ್ಥೆ ಜೊತೆ ಮಾತನಾಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದ ಕಡೆಯಿಂದ ವಿಜೆಎಫ್ ಕೊಡಬೇಕು, ಅದನ್ನು ನೀಡಿ ಎಂದು ಮನವಿ ಮಾಡಲಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ:
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಪ್ರಕಟ ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ…
ಕಾಂಗ್ರೆಸ್‌ನಲ್ಲಿ ಸಂಪುಟ ಸಚಿವ ಸ್ಥಾನಕ್ಕಾಗಿ ಕಸರತ್ತು: 12 ಶಾಸಕರಿಂದ ದೆಹಲಿಯಲ್ಲಿ ಸುರ್ಜೇವಾಲ ಭೇಟಿ ನವದೆಹಲಿ: ಸಚಿವ ಸಂಪುಟ ಪುನಾರಚನೆ ಮಾಡುವಂತೆ…
ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ ಬೆಂಗಳೂರು :ತಾನು 2023ನೇ ಬ್ಯಾಚ್‌ನ ಐಎಎಸ್…
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ ನವದೆಹಲಿ : ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ…
ಬೆಳ್ತಂಗಡಿ: ನಾಯಿ ಅಡ್ಡ ಬಂದು ಆಟೋ ಪಲ್ಟಿ ; ಚಾಲಕ ಸಾವು ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ…
ಉಡುಪಿ: ಬ್ಯಾಡ್ಮಿಂಟನ್ ತಾರೆ ಕಾರ್ಕಳದ ಆಯುಷ್ ಶೆಟ್ಟಿಗೆ ಮುಖ್ಯಮಂತ್ರಿಯಿಂದ ಗೌರವಾರ್ಪಣೆ ಉಡುಪಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ…