ಬಜಪೆ: ಇಲ್ಲಿನ ದೊಡ್ಡಿಕಟ್ಟದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನದ ಬಳಿ MSEZ ಆವರಣ ಗೋಡೆ ಬಳಿ ತೋಡಿಗೆ ಅಡ್ಡವಾಗಿ ಮಣ್ಣು ಹಾಕಿ ನಿರ್ಮಿಸಿದ್ದ ಕಟ್ಟೆ ಮತ್ತು ರಸ್ತೆ ನೀರಿನ ಒತ್ತಡಕ್ಕೆ ಒಡೆದುಹೋದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಹಠಾತ್ ಪ್ರವಾಹದಿಂದ ಸಮೀಪದ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನ, ಮನೆ ಮಧ್ಯರಾತ್ರಿ ಅರ್ಧಮುಳುಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಜಮೀನು, ಕೃಷಿ ಹಾಗೂ ಸೊತ್ತುಗಳಿಗೆ ಅಪಾರ ಹಾನಿ ಉಂಟಾಗಿದೆ. ಪೆರ್ಮುದೆಯ ಮೆನ್ಗಲ್ ಪದವಿನಿಂದ ಹರಿಯುವ ದೊಡ್ಡ ತೋಡಿಗೆ ದೊಡ್ಡಿಕಟ್ಟದಲ್ಲಿ MSEZ ವ್ಯಾಪ್ತಿಯ ಒಳಗೆ ಗುಡ್ಡಗಳ ನಡುವೆ ಮಣ್ಣು ತುಂಬಿಸಿ ಅಣೆಕಟ್ಟೆ ನಿರ್ಮಿಸಲಾಗಿತ್ತು. ಹೆಚ್ಚಿನ ನೀರು ಹೊರಕ್ಕೆ ಹರಿಯಲು ಪೈಪು ಅಳವಡಿಸಲಾಗಿತ್ತಾದರೂ ಅವುಗಳಲ್ಲಿ ಹೂಳು ತುಂಬಿತ್ತು. ಇದರಿಂದಾಗಿ ಈ ಬಾರಿ ನೀರು ಸುಮಾರು 40 ಅಡಿಗಳಷ್ಟು ಸಂಗ್ರಹಗೊಂಡಿತ್ತು. ಅಪಾಯ ಇದೆ ಎಂದು MSEZ ಎಂಜಿನಿಯರ್ ಗೆ ಸ್ಥಳೀಯರು ಮುನ್ಸೂಚನೆ ನೀಡಿದ್ದರಾದರೂ ಅವರು ಆ ಬಗ್ಗೆ ಗಮನ ಹರಿಸಿರಲಿಲ್ಲ.
1 ಗಂಟೆ ಭೀತಿಯ ವಾತಾವರಣ
ಸುಮಾರು ಒಂದು ತಾಸು ನಾವು ತೀರಾ ಹೆದರಿದ್ದೆವು. ಮರ ಬಿದ್ದು 4-5 ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಇರಲಿಲ್ಲ. ಮೊಬೈಲ್ ಫೋನ್ ನೀರಲ್ಲಿ ಎಲ್ಲೋ ಹೋಗಿತ್ತು. ಎಲ್ಲೆಡೆಯಿಂದ ನೀರು ನುಗ್ಗಿದ್ದರಿಂದ ಏನೂ ಮಾಡಲಾರದ ಸ್ಥಿತಿ ಇತ್ತು. ಸುಮಾರು ಅರ್ಧ ಗಂಟೆಯ ಬಳಿಕ ನೀರು ಇಳಿಯಲಾರಂಭಿಸಿತು. ನಾವು ಮಂಚದ ಮೇಲೆ ನಿಂತಿದ್ದರೂ ಎದೆಮಟ್ಟ ನೀರು ಬಂದಿತ್ತು. ಬದುಕಿದ್ದೇ ಹೆಚ್ಚು ಎಂದು ಹಾನಿಗೀಡಾದ ಮನೆಯ ಮಾಲಕ ಮಾಧವ ಅಮೀನ್ ವಿವರಿಸಿದರು.
ನೀರು ನುಗ್ಗುವ ರಭಸಕ್ಕೆ ಹಲವು ಮರಗಳು ಧರಾಶಾಯಿಯಾಗಿದ್ದವು. ಅಡಿಕೆ ಮರ ಮನೆಗೆ ನುಗ್ಗುವ ಮಟ್ಟಕ್ಕೆ ಬಂದಿತ್ತು. ಮನೆಯ ಹೊರಾಂಗಣದಲ್ಲಿದ್ದ ಸೋಪಾ ಛಾವಣಿಗೆ ಸಿಲುಕಿದೆ. ಕುರ್ಚಿ, ಮೇಜು ಇನ್ನೂ ಪತ್ತೆಯಾಗಿಲ್ಲ. ದೈವಸ್ಥಾನದ ಕಾಣಿಕೆ ಡಬ್ಬಿ, ಕುರ್ಚಿ, ಮೇಜುಗಳು ಕೊಚ್ಚಿ ಹೋಗಿವೆ. ಬೈಕ್, ಸ್ಕೂಟರ್‌ಗಳು ಕೊಚ್ಚಿ ಹೋಗಿವೆ. ಜೀಪಿಗೆ ಮಣ್ಣು ತುಂಬಿದೆ. ಪಂಪ್ ಸೆಟ್ ಸ್ವಿಚ್‌ಬೋರ್ಡ್ ಅಷ್ಟೇ ಕಾಣಿಸುತ್ತಿದೆ.
ಭೂಕಂಪ, ಸುನಾಮಿ ಅನುಭವ
ಗುರುವಾರ ರಾತ್ರಿ ಸುಮಾರು 11.45ಕ್ಕೆ ಭೂಕಂಪವಾದ ಹಾಗೆ ಭಾರೀ ಸದ್ದು ಕೇಳಿಸಿತು. ನಾಯಿಗಳು ಒಮ್ಮೆಲೆ ಬೊಗಳಲಾರಂಭಿಸಿದವು. ಕಿಟಕಿಯ ಬಾಗಿಲು ತೆರೆದು ನೋಡಿದಾಗ ಸುನಾಮಿ ರೀತಿಯಲ್ಲಿ ನೀರು ಜಗಲಿ ಏರಿಯಾಗಿತ್ತು. ಕಟ್ಟೆ ಒಡೆದಿದೆ ಎಂದು ತತ್ ಕ್ಷಣ ಊಹಿಸಿದೆ. ಮಂಚದ ಮೇಲೆ ನಿಲ್ಲು ಎಂದು ಪತ್ನಿಗೆ ಸೂಚಿಸಿದೆ. ಮನೆ ಬಾಗಿಲು ನೀರಿನ ರಭಸಕ್ಕೆ ಒಡೆದು ಅಡುಗೆ ಮನೆಯ ಗ್ಯಾಸ್ ಸಿಲಿಂಡರ್, ರೆಫ್ರಿಜರೇಟರ್ ಎಲ್ಲವೂ ನೀರಿನೊಂದಿಗೆ ಮುಂದಿನ ಕೋಣೆಗೆ ಬಂದವು. ಮನೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿ ತೇಲಿ ಹೋದವು. ನಾಲ್ಕೂ ಕಡೆಗಳಿಂದ ನೀರು ಒಳ ನುಗ್ಗಿತ್ತು.
ಜನಪ್ರತಿನಿಧಿ, ಅಧಿಕಾರಿಗಳ ಭೇಟಿ
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. MSEZ ಅಧಿಕಾರಿಗಳೊಂದಿಗೆ ಮಾತನಾಡಿ, ಮನೆ ಹಾಗೂ ದೇವಸ್ಥಾನಕ್ಕೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಡಿಸಿಗೆ ವರದಿ ಸಲ್ಲಿಸಲಾಗುವುದು. ಈ ಸಮಸ್ಯೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ಹೇಳಿದ್ದಾರೆ. ಸ್ಥಳಕ್ಕೆ ಅಭಯಚಂದ್ರ, ಐವನ್ ಡಿ’ಸೋಜಾ, ತಹಶೀಲ್ದಾರರು, ಬಜಪೆ ಪೊಲೀಸ್ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸೂಕ್ತ ಪರಿಹಾರದ ಭರವಸೆ
ದೊಡ್ಡಿಕಟ್ಟದಲ್ಲಿ ಸಂಭವಿಸಿರುವ ಅನಾಹುತದ ಕುರಿತಂತೆ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಘಟನೆಯಿಂದ ಹಾನಿ ಸಂಭವಿಸಿದ ಕಡೆಗೆ ಸೂಕ್ತ ಪರಿಹಾರ ನೀಡಲಾಗುವುದು. ಈ ಬಗ್ಗೆ ಪೂರಕ ಕ್ರಮಗಳನ್ನು ಸಂಸ್ಥೆಯ ವತಿಯಿಂದ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಅಲ್ಲಿನ ಮನೆ, ದೇವಸ್ಥಾನ ಈ ಮೊದಲು ಹೇಗಿತ್ತೋ ಅದೇರೀತಿ ಮರುವ್ಯವಸ್ಥೆ ಮಾಡಿಕೊಡಲಾಗುವುದು ಎಂದು MSEZನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…
ಅಕ್ಟೋಬರ್‌ನಲ್ಲಿ ಮಂಗಳೂರು - ಕುವೈಟ್ ನೇರ ವಿಮಾನ ಆರಂಭ ಮಂಗಳೂರು: ಯುದ್ಧದಿಂದಾಗಿ 6 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕುವೈಟ್ ನೇರ…
ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ ಮೂಡುಬಿದಿರೆ: ಬಿಜೆಪಿ ಮೂಲ್ಕಿ ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಸಕ್ರಿಯರಾಗಿದ್ದ ಯುವ…
ತುಳು ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ ಆಗ್ರಹ: ಮುಖ್ಯಮಂತ್ರಿ SDPI ರಾಜ್ಯಾಧ್ಯಕ್ಷ ಪತ್ರ ಮೈಸೂರು: ಇತ್ತೀಚಿಗೆ ಮಂಗಳೂರಿನ ಜಿಲ್ಲಾಧಿಕಾರಿ…