ಪಕ್ಷದ ಕಾರ್ಯಕರ್ತರ ಸಭೆ ಬಳಿಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೋಟು ರದ್ದತಿ ಬಗ್ಗೆ ರಾತ್ರೋರಾತ್ರಿ ನಿರ್ಧಾರ ಕೈಗೊಳ್ಳುವುದಾದರೆ, ರಾಮಮಂದಿರ ವಿಚಾರದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಮತ್ತು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿ ರದ್ದತಿ ಬಗ್ಗೆ ಚುನಾವಣೆಗೆ ಮುನ್ನ ನಿರ್ಧರಿಸಲಾಗುತ್ತದೆ ಎಂದು ಬಿಜೆಪಿ ಭರವಸೆ ನೀಡುತ್ತಿದೆ. ಆದರೆ 2019 ರ ಚುನಾವಣೆಯೋ ಅಥವಾ 2050 ರ ಚುನಾವಣೆಯೋ ಎಂದು ಠಾಕ್ರೆ ಛೇಡಿಸಿದ್ದಾರೆ.
ಇದುವರೆಗೆ ಅಭಿವೃದ್ಧಿ ಬಿಜೆಪಿಯ ಕಾರ್ಯಸೂಚಿಯಾಗಿತ್ತು. ಆದರೆ ಇದೀಗ ರಾಮಮಂದಿರ ವಿವಾದವನ್ನು ಕೈಗೆತ್ತಿಕೊಂಡಿದೆ ಎಂದು ಎನ್‍ಡಿಎ ಮೈತ್ರಿಕೂಟದಲ್ಲಿರುವ ಪಕ್ಷದ ಮುಖಂಡ ಲೇವಡಿ ಮಾಡಿದರು. ಅಂತೆಯೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ಮಾಡಿದ ಅವರು, ಮಹಾರಾಷ್ಟ್ರ ಕೈಗೊಂಡ ಸಾಲ ಮನ್ನಾ ಪ್ರಯೋಜನ ಯಾವ ರೈತರಿಗೂ ದೊರಕಿಲ್ಲ ಎಂದು ಹೇಳಿದರು. “ನೋಟು ರದ್ದತಿ ನಿರ್ಧಾರವನ್ನು ದಿಢೀರನೇ ಬಿಜೆಪಿ ಕೈಗೊಂಡಿತು. ಅಂತೆಯೇ ರಾಮಮಂದಿರ ನಿರ್ಮಾಣಕ್ಕೂ ಕೈಗೊಳ್ಳಿ; ಏಕೆಂದರೆ ನಿಮಗೆ ಬಹುಮತ ಇದೆ” ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.