ಅಂತರ್ ರಾಜ್ಯ ಪ್ರಯಾಣದ ಮೇಲಿನ ನಿರ್ಬಂಧ ತೆರವಿಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ -Vishwanews24
ಅಂತರ್ ರಾಜ್ಯ ಪ್ರಯಾಣದ ಮೇಲಿನ ನಿರ್ಬಂಧ ತೆರವಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ -Vishwanews24
ನವದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಅಂತರ್ ರಾಜ್ಯ ಪ್ರಯಾಣದ ಮೇಲಿನ ನಿರ್ಬಂಧವನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಶನಿವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ‘ಅನ್ ಲಾಕ್ 3″ ಗಾಗಿ ಕೇಂದ್ರ ಮಾರ್ಗಸೂಚಿಗಳ ಅಡಿಯಲ್ಲಿ ಅಥವಾ ಕೊರೋನಾ ವೈರಸ್ ಲಾಕ್ಡೌನ್ ಅನ್ನು ಸರಾಗಗೊಳಿಸುವ ಮೂರನೇ ಹಂತದ ಅಡಿಯಲ್ಲಿ, ಅಂತರ್ ರಾಜ್ಯ ಅಥವಾ ರಾಜ್ಯದೊಳಗಿನ ಯಾವುದೇ ಜನರು ಅಥವಾ ಸರಕುಗಳ ಪ್ರಯಾಣಕ್ಕೆ ನಿರ್ಬಂಧಗಳಿಲ್ಲ. ಕೂಡಲೇ ಈ ನಿರ್ಬಂಧ ಸಡಿಲಗೊಳಿಸಿ. ವ್ಯಕ್ತಿಗಳು ಅಥವಾ ಸರಕುಗಳ ಚಲನೆಗೆ ಪ್ರತ್ಯೇಕ ಅನುಮತಿ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಂತೆಯೇ ಇಂತಹ ನಿರ್ಬಂಧಗಳನ್ನು ನಿರಂತರವಾಗಿ ಹೇರುವುದು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಹೊರಡಿಸಲಾದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಯಾವುದಾದರೂ ಸಂಚಾರ ನಿರ್ಬಂಧಗಳಿದ್ದರೆ ತೆಗೆದು ಹಾಕಿ ಮತ್ತು ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಭಲ್ಲಾ ಅವರು ತಮ್ಮ ಪತ್ರದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದ್ದಾರೆ.
