ಅನರ್ಹ ಶಾಸಕರ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ:ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಬುಧವಾರಕ್ಕೆ ಮುಂದೂಡಿದೆ.

ಅನರ್ಹ ಶಾಸಕರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು. ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು ಮತ್ತು ಸ್ಪೀಕರ್ ಪರ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು.

ಬುಧವಾರದಂದು ಅನರ್ಹ ಶಾಸಕರ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ನಿಗದಿಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಕೋರಿ ಪೀಠಕ್ಕೆ ಅರ್ಜಿ ಸಲ್ಲಿಸುವುದಾಗಿ ಅನರ್ಹ ಶಾಸಕರ ಪರ ವಾದಿಸುತ್ತಿರುವ ವಕೀಲ ಮುಕುಲ್ ರೋಹಟಗಿ ಅವರು ಹೇಳಿದರು. ಹೀಗಾಗಿ ಸುದೀರ್ಘ ವಿಚಾರಣೆಯ ಅಗತ್ಯ ಇರುವುದರಿಂದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡುತ್ತಿರುವುದಾಗಿ ತ್ರಿಸದಸ್ಯ ಪೀಠ ಹೆಳಿದೆ.

ರಾಜೀನಾಮೆ ಸಲ್ಲಿಸಿದ್ದ ಶಾಸಕರಿಗೆ ಯಾವುದೇ ನೋಟೀಸು ಜಾರಿ ಮಾಡದೆ ಸ್ಪೀಕರ್ ಅವರು ಅನರ್ಹಗೊಳಿಸಿದ್ದಾರೆ. ಒಂದು ವಾರ ಮೊದಲೇ ನೋಟೀಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮ ಇದ್ದರು ಈ ಶಾಸಕರ ವಿಚಾರದಲ್ಲಿ ಅದನ್ನು ಪಾಲಿಸಿಲ್ಲ ಎಂದು ರೊಹಟಗಿ ಅವರು ತಮ್ಮ ವಾದವನ್ನು ಮಂಡಿಸಿದರು. ಇನ್ನು ಯಾವುದೇ ಶಾಸಕನ ರಾಜೀನಾಮೆ ವೈಯಕ್ತಿಕ ಮತ್ತು ಸ್ವಯಂಪ್ರೇರಿತವಾಗಿದ್ದಲ್ಲಿ ಅದನ್ನು ಸ್ಪೀಕರ್ ಅವರು ಅಂಗೀಕರಿಸಬೇಕು, ಆದರೂ ಇಲ್ಲಿ ಯಾವುದೇ ವಿಚಾರಣೆ ನಡೆಸದೇ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಲಾಗಿದೆ.