ಅನುಮಾನವೇ ಬೇಡ, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಯೇ ಕಟ್ಟುತ್ತೇವೆ : ಕಲ್ಲಡ್ಕ ಪ್ರಭಾಕರ್ ಭಟ್ -Vishwanews24

Featured, ರಾಜ್ಯ ನ್ಯೂಸ್

ಬಾಗಲಕೋಟೆ: ಅನುಮಾನವೇ ಬೇಡ ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಿಯೇ ಕಟ್ಟುತ್ತೇವೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮಾನವೇ ಬೇಡ, ನೂರಕ್ಕೆ ನೂರು ರಾಮ ಮಂದಿರ ಕಟ್ಟಿಯೇ ಕಟ್ಟುತ್ತೇವೆ. ಸುಪ್ರೀಂ ಕೋರ್ಟ್ ರಾಮ ಮಂದಿರದ ಪರವಾಗಿಯೇ ತೀರ್ಪು ಕೊಡಬೇಕು. ಅದನ್ನ ಬಿಟ್ಟು ಸುಪ್ರೀಂ ಕೋರ್ಟಿಗೆ ಬೇರೆ ದಾರಿಯೇ ಇಲ್ಲ. ಅಲ್ಲಿರುವ ಎಲ್ಲ ದಾಖಲೆಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಈಗಿರುವ ರಾಮನ ಮೂರ್ತಿ ಜಾಗ ರಾಮ ಮಂದಿರನೇ ಎಂದು ಹಿಂದಿನ ಹೈಕೋರ್ಟ್ ಹೇಳಿದೆ. ಈಗ ಅದನ್ನ ಬದಲು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಬಿಹಾರ ಪ್ರವಾಹದ ಬಗ್ಗೆ ಪ್ರಧಾನಿ ಟ್ವೀಟ್ ಮಾಡುತ್ತಾರೆ. ಆದರೆ ಕರ್ನಾಟಕದ ನೆರೆ ಬಗ್ಗೆ ಟ್ವೀಟ್​ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಪ್ರಧಾನಿಗಳು ಇಲ್ಲಿಗೆ ಬಂದೇ ಪರಿಹಾರ ಕೊಡಬೇಕಾ? ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿ ವರದಿ ಮಾಡಿದ್ದಾರೆ. ಪ್ರಧಾನಿ ಮೋದಿ ವಿಶ್ವನಾಯಕ. ಪ್ರತಿ ಬಾರಿ ಇಲ್ಲಿಗೆ ಬರಬೇಕು ಎನ್ನುವುದು ಸರಿಯಲ್ಲ ಎಂದರು.

ಪ್ರಧಾನಿ ಮೋದಿ ಒಬ್ಬ ಒಳ್ಳೆಯ ಮನುಷ್ಯ. ಕೇಂದ್ರ ಸರ್ಕಾರದ ಪರಿಹಾರ ಹಂತಹಂತವಾಗಿ ಬರಲಿದೆ. ದೇಶದ 5 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿರುವುದರಿಂದ ಸ್ವಲ್ಪ ತಡ ಆಗಲಿದೆ. ಕೇಂದ್ರ ಸರ್ಕಾರ ಜನಪರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ದೇಶದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು