ಅಯ್ಯಪ್ಪನ ದರ್ಶನಕ್ಕೆ ಬಂದ ತೃಪ್ತಿ ದೇಸಾಯಿಗೆ ಏರ್ಪೋರ್ಟ್ ನಲ್ಲೆ ತಡೆ, ಪ್ರತಿಭಟನಾಕಾರರಿಂದ ದಿಗ್ಬಂಧನ

Featured, ರಾಷ್ಟ್ರ ನ್ಯೂಸ್
ಕೊಚ್ಚಿ: ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ, ಆದರೆ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಏರ್ ಪೋರ್ಟ್ ನಿಂದ ಹೊರಗೆ ಬರಲು ಸಾಧ್ಯವಾಗಿಲ್ಲ.
ಬೆಳಗ್ಗೆ 4.40ಕ್ಕೆ ಪುಣೆಯಿಂದ ಆಗಮಿಸಿರುವ ತೃಪ್ತಿ ಮತ್ತವರ ತಂಡ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ..
ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಏರ್ಪೋರ್ಟ್ ಟ್ಯಾಕ್ಸಿ ಚಾಲಕರು, ತಾವು ಯಾವುದೇ ಕಾರಣಕ್ಕೂ ತೃಪ್ತಿ ದೇಸಾಯಿ ಶಬರಿಮಲೆ ತೆರಳಲು ಬಿಡವುದಿಲ್ಲ, ತಮ್ಮ ಸ್ವಂತ ವಾಹನದಲ್ಲಿ ಅಥವಾ ಪೊಲೀಸ್ ವಾಹನದಲ್ಲಿ ತೆರಳಲಿ ಎಂದು ಹೇಳಿದ್ದಾರೆ. ಶತಮಾನಗಳಷ್ಟು ಹಿಂದಿನ ಸಂಪ್ರದಾಯ ಮುರಿಯಲು ತೃಪ್ತಿ ದೇಸಾಯಿ ಮತ್ತವರ ತಂಡ ಬಂದಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರಿಸಿರುವ ಸ್ಥಳೀಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ತೃಪ್ತಿ ದೇಸಾಯಿ ಅಯ್ಯಪ್ಪ ದರ್ಶನ ಪಡೆಯುತ್ತಿಲ್ಲ. ಇಲ್ಲಿನ ಶಾಂತಿ-ನೆಮ್ಮದಿ ಕೆಡಿಸಲು ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರತಿಭಟನಾಕರರು ಹಿಂಸಾಚಾರಕ್ಕಿಳಿಯಬಾರದು, ಒಮ್ಮೆ ನಾವು ಅಲ್ಲಿ ತಲುಪಿದರೆ ನಮಗೆ ಯಾವ ರೀತಿಯ ಭದ್ರತೆ ನೀಡಿದ್ದಾರೆ ಎಂಬುದು ತಿಳಿಯುತ್ತದೆ. ಒಂದು ವೇಳೆ ನಮಗೆ ಭದ್ರತೆ ನೀಡದಿದ್ದರೂ ನಾವು ಅಲ್ಲಿಗೆ ತೆರಳುತ್ತೇವೆ. ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನ ಪಡೆಯದೆ ವಾಪಸ್ ಮಹಾರಾಷ್ಟ್ರಕ್ಕೆ ತೆರಳುವುದಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.