ಅಲ್ಲಾಹು, ಭಗವಂತನ ಹೆಸರಲ್ಲಿ ಮಕ್ಕಳನ್ನು ಮಾಡುತ್ತಲೇ ಇದ್ದರೆ ಉಳಿಗಾಲವಿಲ್ಲ: ಬಿಜೆಪಿ ಸಂಸದ

Featured, ರಾಷ್ಟ್ರ ನ್ಯೂಸ್

ದೆಹಲಿ: ಅದಾಗಲೇ ಶತಕೋಟಿ ಮೀರಿ ನಿಯಂತ್ರಣ ತಪ್ಪಿ ಬೆಳೆಯುತ್ತಲೇ ಇರುವ ದೇಶದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಣಕ್ಕೆ ತರಲು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸರು ಬಲವಾಗಿ ಆಗ್ರಹಿಸಿದ್ದಾರೆ.

ಈ ಮಟ್ಟದಲ್ಲಿ ಜನಸಂಖ್ಯೆ ವೃದ್ಧಿಯಾಗುತ್ತಲೇ ಹೋದಲ್ಲಿ ದೇಶದ ಅಭಿವೃದ್ಧಿ ಬಹಳ ಕಷ್ಟ ಎಂದು ಬಿಜೆಪಿ ಸಂಸದ ಅಶೋಕ್‌ ಬಜ್ಪಯಿ ಹೇಳಿದ್ದು, 2022ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿರುವ ಭಾರತ, ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಇರುವ ದೇಶವಾಗಲಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೇ 2050ರ ವೇಳೆಗೆ ದೇಶದ ಜನಸಂಖ್ಯೆ 166 ಕೋಟಿ ತಲುಪಲಿದೆ ಎಂದ ಬಜ್ಪೆಯಿ, “ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಅಭಿವೃದ್ಧಿಯನ್ನು ಮರೆಮಾಚಲಿದೆ” ಎಂದಿದ್ದಾರೆ.

ಇದಕ್ಕೆ ಬೆಂಬಲ ನೀಡಿದ ಮತ್ತೊಬ್ಬ ಬಿಜೆಪಿ ಸಂಸದ ವಿಜಯ್‌ ಪಾಲ್‌ ಸಿಂಗ್‌ ತೋಮರ್‌, “ಸ್ವತಂತ್ರ ಬಂದಾಗ 36 ಕೋಟಿಯಷ್ಟಿದ್ದ ಜನಸಂಖ್ಯೆ ಈಗ 135 ಕೋಟಿಗೆ ಏರಿಕೆ ಕಂಡಿದೆ. ವರ್ಷಕ್ಕೆ ಎರಡು ಕೋಟಿಯಷ್ಟು ವೇಗದಲ್ಲಿ ಜನಸಂಖ್ಯೆ ವೃದ್ಧಿಸುತ್ತಲೇ ಇದೆ” ಎಂದು ಹೇಳಿದ್ದಾರೆ.

“ಭಗವಂತ ಹಾಗು ಅಲ್ಲಾಹುವಿನ ಹೆಸರಲ್ಲಿ ಮಕ್ಕಳನ್ನು ಹುಟ್ಟಿಸಲಾಗುತ್ತಿರುವ ಕಾರಣ, ಭೂಮಿಯ ಮೇಲಿರುವ ಶೇ 2.4ರಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ ಭಾರತದಲ್ಲಿ ಅದಾಗಲೇ ಜಗತ್ತಿನ ಜನಸಂಖ್ಯೆಯ ಶೇ 17.4 ರಷ್ಟು ಜನರಿದ್ದಾರೆ” ಎಂದು ಹೇಳಿದ್ದಾರೆ.