ಉಡುಪಿ:ಉಡುಪಿ ಜಿಲ್ಲಾ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಅವರ ಅಧ್ಯಕ್ಷತೆಯಲ್ಲಿ ಜರಗಿತು.
“ಸರಕಾರ ಬದಲಾಯಿಸಿ, ಬಿಜೆಪಿ ಗೆಲ್ಲಿಸಿ’ ಎನ್ನುವ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮತ್ತೂಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಅಹರ್ನಿಶಿ ದುಡಿಯಬೇಕು ಎಂದು ಜಿಲ್ಲಾ ಚುನಾವಣಾ ಸಂಚಾಲಕ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚುನಾವಣೆಯನ್ನು ಅತ್ಯಂತ ಯಶಸ್ವಿ ಮತ್ತು ಸುಸೂತ್ರವಾಗಿ ನಿರ್ವಹಣೆ ಮಾಡುವ ಬಗ್ಗೆ ಜವಾಬ್ದಾರಿ, ಸವಾಲು, ಕಾರ್ಯಯೋಜನೆ, ಅಭಿಯಾನ ಹೀಗೆ ಒಟ್ಟು 16 ಅಂಶಗಳನ್ನೊಳಗೊಂಡ ವಿಷಯಗಳ ಬಗ್ಗೆ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮತ್ತು ಸಂಧ್ಯಾ ರಮೇಶ್ ವಿವರಣೆ ನೀಡಿದರು.
ಮಾಧ್ಯಮ ನಿರ್ವಹಣೆಯ ಬಗ್ಗೆ ಕಟಪಾಡಿ ಶಂಕರ ಪೂಜಾರಿ, ಚುನಾವಣಾ ನೀತಿ ಸಂಹಿತೆ ಮತ್ತು ಕಾನೂನಿನ ವಿಚಾರವಾಗಿ ಮನೋಹರ ಕಲ್ಮಾಡಿ ಮಾಹಿತಿ ನೀಡಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್, ವಿವಿಧ ಚುನಾಯಿತ ಪ್ರತಿನಿಧಿಗಳು, ಮೋರ್ಚಾ ಹಾಗೂ ಪ್ರಕೋಷ್ಠಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.