ಆನ್‌ಲೈನ್ ಔಷಧ ವ್ಯಾಪಾರ ವಿರೋಧಿಸಿ ದೇಶಾದ್ಯಂತ ನಾಳೆ ಔಷಧ ಅಂಗಡಿಗಳು ಬಂದ್ ..
ಬೆಂಗಳೂರು: ಆನ್ಲೈನ್ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ಮಾರಾಟಗಾರರು ಶುಕ್ರವಾರ (ಸೆ.28) ದೇಶವ್ಯಾಪಿ ಔಷಧ ಮಳಿಗೆಗಳ ಬಂದ್ಗೆ ಕರೆ ನೀಡಿದ್ದಾರೆ. ಹೀಗಾಗಿ ರಾಜ್ಯದ ಜನತೆ ಗುರುವಾರವೇ ಅಗತ್ಯ ಔಷಧ ಖರೀದಿಸಿಟ್ಟು ಕೊಳ್ಳುವುದು ಉತ್ತಮ.
ಕೇಂದ್ರ ಸರ್ಕಾರ ಜಾರಿ ಗೊಳಿಸಲು ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಸಂಸ್ಥೆ ಒಂದು ದಿನ ಬಂದ್ಗೆ ಕರೆ ನೀಡಿದೆ. ಹೀಗಾಗಿ ರಾಜ್ಯದಲ್ಲೂ ಕರ್ನಾಟಕ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಸಂಸ್ಥೆ ಸಂಪೂರ್ಣ ಔಷಧ ಮಳಿಗೆಗಳು ಬಂದ್ ಆಗಲಿದೆ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ವಿವಿಧ ಕಾಯಿಲೆಗೆ ನಿರಂತರವಾಗಿ ಮಾತ್ರೆ ಹಾಗೂ ಔಷಧ ಸೇವಿಸುತ್ತಿರುವವರು ಮುಂಜಾಗ್ರತೆ ಯಾಗಿ ಗುರುವಾರವೇ ಖರೀದಿ ಸಿಟ್ಟುಕೊಳ್ಳುವುದು ಉತ್ತಮ.
ಆತಂಕ ಬೇಡ: ರಾಜ್ಯದಲ್ಲಿ 24 ಸಾವಿರ ಔಷಧ ಮಾರಾಟಗಾರರಿದ್ದಾರೆ. ಇವರಲ್ಲಿ 6.5 ಸಾವಿರ ಮಂದಿ ಬೆಂಗಳೂರಿನಲ್ಲಿಯೇ ಮಳಿಗೆ ಹೊಂದಿದ್ದು, ಬಂದ್ ದಿನ ಸೇವೆ ಸ್ಥಗಿತಗೊಳಿಸಲಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕಾಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳು ರೋಗಿಗಳ ಹಿತದೃಷ್ಟಿಯಿಂದ ತೆರೆದಿಡಲಿವೆ. ಇನ್ನು ಜನರಿಕ್ ಔಷಧ ಮಳಿಗೆಯೂ ತೆರೆದಿರಲಿದೆ. ಹೀಗಾಗಿ ರಾಜ್ಯದ ಎಲ್ಲೆಡೆ ಜೀವರಕ್ಷಕ ಔಷಧಗಳು ರೋಗಿಗಳಿಗೆ ಸಿಗಲಿದ್ದು, ಆತಂಕಪಡುವ ಅಗತ್ಯವಿಲ್ಲ.
ಔಷಧ ದಾಸ್ತಾನಿಗೆ ಸೂಚನೆ: ಔಷಧ ಮಳಿಗೆಗಳ ಮಾಲೀಕರು ಬಂದ್ಗೆ ಕರೆ ನೀಡಿದ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಅಗತ್ಯ ಜೀವರಕ್ಷಕ ಔಷಧವನ್ನು ದಾಸ್ತಾನು ಮಾಡಿಕೊಳ್ಳುವಂತೆ ರಾಜ್ಯದ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಜಿಲ್ಲಾ, ತಾಲೂಕು/ಸಾರ್ವಜನಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೀವರಕ್ಷಕ ಔಷಧ ಸಿಗಲಿದೆ.
ಇ-ಫಾರ್ಮಸಿ ಯನ್ನು ಕೇಂದ್ರ ಸರ್ಕಾರ ಆತುರದಲ್ಲಿ ಜಾರಿಗೊಳಿಸಲು ಮುಂದಾಗಿದೆ. ರಾಜ್ಯದ ಎಲ್ಲ ಔಷಧ ಮಾರಾಟಗಾರರು ಮಳಿಗೆ ಬಂದ್ ಮಾಡಿ ಖಂಡಿಸಲಿದ್ದೇವೆ. ನ್ಯೂನತೆಯನ್ನು ಗ್ರಾಹಕರಿಗೆ ತಿಳಿಸುವುದು ನಮ್ಮ ಉದ್ದೇಶ.
ರಘುನಾಥ ರೆಡ್ಡಿ, ಕರ್ನಾಟಕ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಸಂಸ್ಥೆ ಅಧ್ಯಕ್ಷ

