ಆಪರೇಷನ್ ಕಮಲ ಸಂಬಂಧ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಬಿಎಸ್ ವೈ ಅವರದ್ದೆ ಎಂದು ನಾನು ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ – Vishwanews24
ಮಂಗಳೂರು: ಆಪರೇಷನ್ ಕಮಲ ಸಂಬಂಧ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಬಿ.ಎಸ್.ಯಡಿಯೂರಪ್ಪ ಅವರದ್ದೆ ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು..
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಡುಗಡೆಯಾಗಿರುವ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಮಾತು. ಈ ಕುರಿತು ಸಮಗ್ರ ತನಿಖೆಗೆ ಆದೇಶ ಮಾಡುತ್ತೇನೆಂದು ಅವರು ಹೇಳಿದರು.
ಆಡಿಯೋ ಸಂಬಂಧ ಪ್ರಧಾನಿಯವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು. ಅವರು ಸಹಕಾರ ಕೊಟ್ಟರೆ, ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಆಡಿಯೋವನ್ನು ಮಿಮಿಕ್ರಿ ಎಂದು ಹೇಳಿದ್ದಾರೆ. ಆದರೆ, ಈ ಕುರಿತು ಸತ್ಯಾಸತ್ಯತೆ ಹೊರ ಬರಬೇಕಾಗಿದೆ. ಹೀಗಾಗಿ ತನಿಖೆ ಮಾಡಬೇಕು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಅವಶ್ಯಕತೆ ಇದೆ ಎಂದು ಸಿಎಂ ಹೇಳಿದರು.

