ಇಂದಿನಿಂದ ಪದವಿ ಕಾಲೇಜು ಆರಂಭ- ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ : ಡಿಸಿಎಂ ಅಶ್ವತ್ಥನಾರಾಯಣ -Vishwanews24

Featured, ರಾಜ್ಯ ನ್ಯೂಸ್

ಇಂದಿನಿಂದ ಪದವಿ ಕಾಲೇಜು ಆರಂಭ- ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ : ಡಿಸಿಎಂ ಅಶ್ವತ್ಥನಾರಾಯಣ -Vishwanews24

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಹೇರಲಾಗಿದ್ದ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಇಂದಿನಿಂದ (ಜು.26) ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೂಚಿಸಿದ್ದಾರೆ.

ಈ ವಿಚಾರವಾಗಿ ಭಾನುವಾರ ಹೇಳಿಕೆ ನೀಡಿರುವ ಅವರು, “ನೇರ ತರಗತಿಗಳಿಗೆ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಅವರು ಇಚ್ಛೆ ಇದ್ದರೆ ಭೌತಿಕ ತರಗತಿಗಳಿಗೆ ಹಾಜರಾಗಬಹುದು, ಇಲ್ಲವೇ ಆನ್‌ಲೈನ್ ಮೂಲಕವೂ ಕಲಿಯಬಹುದು. ಆದರೆ, ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ” ಎಂದು ಅವರು ತಿಳಿಸಿದ್ದಾರೆ.

“ನೇರ ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಈಗಾಗಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಿದ್ದು, ಅದನ್ನು ಎಲ್ಲ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜುಗಳು ಚಾಚೂತಪ್ಪದೇ ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ” ಎಂದು ತಿಳಿಸಿದ್ದಾರೆ.