ಇಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಠಾಕ್ರೆ ಕುಟುಂಬದ ಮೊದಲ ಸಿಎಂ ಉದ್ಧವ್ ಠಾಕ್ರೆ ಪ್ರಮಾಣವಚನ -Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ವಿಧಾನಸಭಾ ಚುಣಾವಣಾ ಫಲಿತಾಂಶದ ಬಳಿಕ ತಿಂಗಳ ಕಾಲ ನಡೆದ ರಾಜಕೀಯ ಹಗ್ಗಜಗ್ಗಾಟದ ಬಳಿಕ ಶಿವಸೇನಾ ತನ್ನ ನಿಲುವನ್ನು ಸಾಧಿಸಿಕೊಳ್ಳುವ ಸನಿಹಕ್ಕೆ ಬಂದಿದೆ.

ಗುರುವಾರ(ನವೆಂಬರ್​ 28) ಸಂಜೆ 6:40ಕ್ಕೆ ಶಿವಾಜಿ ಪಾರ್ಕ್​ನಲ್ಲಿ ನಡೆಯುವ ಸಮಾರಂಭದಲ್ಲಿ ಉದ್ಧವ್​ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಠಾಕ್ರೆ ಕುಟುಂಬದಲ್ಲಿ ಸಿಎಂ ಸ್ಥಾನ ಅಲಂಕರಿಸಿದ ಮೊದಲಿಗ ಎಂಬ ಹೆಸರಿನ ಜತೆಗೆ ಮನೋಹರ್​ ಜೋಶಿ ಮತ್ತು ನಾರಾಯಣ ರಾಣೆ ಬಳಿಕ ಶಿವಸೇನಾ ಪಕ್ಷದಲ್ಲಿ ಸಿಎಂ ಸ್ಥಾನ ಪಡೆದ ಮೂರನೇ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಲಿದ್ದಾರೆ.

ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ‘ಮಹಾ ವಿಕಾಸ ಅಘಾಡಿ’ ಮೈತ್ರಿಕೂಟದ ನಾಯಕನಾಗಿ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಯ್ಕೆ ಮಾಡಿದ್ದು, ಉದ್ಧವ್ ಠಾಕ್ರೆ ಶಿವಾಜಿ ಪಾರ್ಕ್​ನಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ಸಿಎಂ ಆಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ರಾಜ್ಯಪಾಲರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ದೇಶದ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.