ಉಡುಪಿ ಜಿಲ್ಲೆಯ ರಜತ ಮಹೋತ್ಸವ-2023 : ಜ. 21ರಂದು ಕಾಪು ಕಡಲ ಕಿನಾರೆಯಲ್ಲಿ ಸಂಭ್ರಮಾಚರಣೆ – Vishwanews24
ಉಡುಪಿ ಜಿಲ್ಲೆಯ ರಜತ ಮಹೋತ್ಸವ-2023 : ಜ. 21ರಂದು ಕಾಪು ಕಡಲ ಕಿನಾರೆಯಲ್ಲಿ ವೈಭವದ ಸಂಭ್ರಮಾಚರಣೆ
ಕಾಪು ಪುರಸಭೆಯಿಂದ ಕಾಪು ಪೇಟೆಯಾಗಿ ಕಾಪು ಬೀಚ್ವರೆಗೆ ವೈಭವದ ಶೋಭಾಯಾತ್ರೆ
ಕಾಪು: ಉಡುಪಿ ಜಿಲ್ಲೆ ರಚನೆಗೊಂಡು ರಜತ ವರ್ಷಾಚರಣೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾಪು ಕಡಲ ಕಿನಾರೆಯಲ್ಲಿ ಜನವರಿ 21ರಂದು ಉಡುಪಿ ಜಿಲ್ಲೆಯ ರಜತ ಮಹೋತ್ಸವ-2023 ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ತಾಲೂಕು ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯು ರಚನೆಯಾಗಿ ಇಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವೈಶಿಷ್ಟ್ಯ ಪೂರ್ಣವಾದ ರಜತ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಲು ಉಡುಪಿ ಜಿಲ್ಲಾಡಳಿತ, ಕೇಂದ್ರ, ರಾಜ್ಯ ಸಚಿವರು ಮತ್ತು ಶಾಸಕರೆಲ್ಲರೂ ಜೊತೆ ಸೇರಿ ತೀರ್ಮಾನಿಸಿದ್ದು ಅದರಂತೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮವು ಕಾಪುವಿನಲ್ಲಿ ವೈಭವದಿಂದ ನಡೆಯಲಿದೆ ಎಂದರು.
ಕಾಪು ತಾಲೂಕು ಆಡಳಿತ, ವಿವಿಧ ಇಲಾಖೆಗಳು, ಪುರಸಭೆಯೂ ಸೇರಿದಂತೆ ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ಗಳು ಹಾಗೂ ವಿವಿಧ ಶಾಲಾ ಕಾಲೇಜುಗಳು, ಸಾರ್ವಜನಿಕ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಧ್ಯಾಹ್ನ 2 ಗಂಟೆಗೆ ವಿವಿಧ ಸಾಂಸ್ಕೃತಿಕ ತಂಡಗಳು, ಕಾಪು ಕ್ಷೇತ್ರದ ವೈಶಿಷ್ಟ್ಯತೆಯನ್ನು ಮೆರೆಯುವ ಟ್ಯಾಬ್ಲೊಗಳೊಂದಿಗೆ ಕಾಪು ಪುರಸಭೆಯಿಂದ ಕಾಪು ಪೇಟೆಯಾಗಿ ಕಾಪು ಬೀಚ್ವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಗ್ರಾಮ ಪಂಚಾಯತ್ಗಳ ಪ್ರಾಯೋಜಕತ್ವದಲ್ಲಿ ಮತ್ತು ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಾಂಸ್ಕತಿಕ ಸಂಗಮ ಕಾರ್ಯಕ್ರಮ ನಡೆಯಲಿದೆ. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಟಿಯಲ್ಲಿ ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಪ್ರವೀಣ್ ಕಾಪು ಉಪಸ್ಥಿತರಿದ್ದರು.
Join our Whatsapp group by clicking the below link 👇👇
