ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮಸ್ಯೆಯನ್ನು ರಘುಪತಿ ಭಟ್ ಅವರೇ ಬಗೆಹರಿಸಲಿ: ಪ್ರಮೋದ್ ಮಧ್ವರಾಜ್ – Vishwanews24

Featured, ಉಡುಪಿ

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಮಸ್ಯೆಯನ್ನು ರಘುಪತಿ ಭಟ್ ಅವರೇ ಬಗೆಹರಿಸಲಿ: ಪ್ರಮೋದ್ ಮಧ್ವರಾಜ್ – Vishwanews24

ಉಡುಪಿ: ಉದ್ಯಮಿ ಡಾ. ಬಿ. ಆರ್. ಶೆಟ್ಟಿಯವರು ಉಡುಪಿಯಲ್ಲಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಸ್ಪತ್ರೆ ನಿರ್ಮಿಸಿ ನಿರ್ವಹಿಸುತ್ತಿದ್ದರು.

ಈ ಆಸ್ಪತ್ರೆ ನಿರ್ಮಾಣಗೊಂಡ ಬಳಿಕ ಹತ್ತು ಸಾವಿರಕ್ಕೂ ಹೆಚ್ಚು ಗರ್ಬಿಣಿಯರು ಸಂತೋಷದಿಂದ ಈ ಆಸ್ಪತ್ರೆಯಲ್ಲಿ ಮಕ್ಕಳನ್ನ ಹೆತ್ತಿದ್ದಾರೆ, ಆಸ್ಪತ್ರೆಯವರೇ ಆಹಾರ ಮತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

400 ಬೆಡ್ ಗಳ ಆಸ್ಪತ್ರೆಯನ್ನು ಕಟ್ಟಿಸಲು ಸರಕಾರಿ ಜಾಗವನ್ನು ಹಲವು ವರ್ಷಗಳಿಗೆ ಗುತ್ತಿಗೆಯಾಧಾರದಲ್ಲಿ ನೀಡಬೇಕು, ಅಲ್ಲಿಂದ ಬರುವ ಆದಾಯದಿಂದ 200 ಬೆಡ್ ಗಳುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಮುಂದುವರಿಸುತ್ತೇವೆ ಎಂದು ಸರಕಾರದೊಂದಿಗೆ ಎಂ. ಓ. ಯು ಮಾಡಿಸಿಕೊಂಡಿತ್ತು.

ಹಿಂದಿನ ಸರ್ಕಾರದೊಂದಿಗೆ ಮಾಡಿಕೊಂಡಿರುವ ಕಾನೂನಾತ್ಮಕ ಒಪ್ಪಂದದಂತೆ ಎರಡು ಆಸ್ಪತ್ರೆ ಗಳ ಈ ಯೋಜನೆಯನ್ನು ಡಾ. ಬಿ.ಆರ್ ಶೆಟ್ಟಿಯವರು ಸ್ವಂತ ಲಾಭಕ್ಕಾಗಿ ಮಾಡದೆ 400 ಬೆಡ್ ಗಳ ಸುಸಜ್ಜಿತ ಆಸ್ಪತ್ರೆಯಿಂದ ಬಂದ ಲಾಭಾಂಶವನ್ನು ಸಂಪೂರ್ಣವಾಗಿ ಎರಡೂ ಅಸ್ಪತ್ರೆಗಳ ನಿರ್ವಹಣೆ ಮತ್ತು ಅಭಿವೃದ್ದಿಗಾಗಿ ಬಳಸಿಕೊಳ್ಳುವುದಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು.

ಸರಕಾರ ಬದಲಾದ ಮೇಲೆ ಹಾಲಿ ಶಾಸಕ ರಘುಪತಿ ಭಟ್ ರವರು 400 ಬೆಡ್ ಗಳ ಆಸ್ಪತ್ರೆಯನ್ನು ಕಟ್ಟಿಸಲು ವಿರೋಧ ತೋರಿದ ಹಿನ್ನಲೆಯಲ್ಲಿ ಮತ್ತು ಸರಕಾರಿ ಅನುದಾನ ಮತ್ತು ಯೋಜನೆಗಳ ಬಿಲ್ ಬಾಕಿ ಪಾವತಿಯಾಗದೇ ಇರುವುದರಿಂದಾಗಿ ಬಿ. ಆರ್ ಶೆಟ್ಟಿ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸಿ ಅದರ ನಿರ್ವಹಣೆಯ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವುದಾಗಿ ಸರಕಾರಕ್ಕೆ ಪತ್ರ ಬರೆದು ನೋಟಿಸ್ ನೀಡಿದೆ.

400 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿನ ಸರಕಾರ ಅನುಮತಿ ನೀಡಿದ್ದರೂ, ಸರಕಾರ ಬದಲಾದ ಮೇಲೆ ಶಾಸಕ ರಘುಪತಿ ಭಟ್ ರವರು ಈ ಆಸ್ಪತ್ರೆ ನಿರ್ಮಾಣಕ್ಕೆ ತಡೆಯೊಡ್ಡುತ್ತಾ ಬಂದಿರುವುದರಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸುಸಜ್ಜಿತ ಆಸ್ಪತ್ರೆ ಇಂದು ಅವ್ಯವಸ್ಥೆಯತ್ತ ಮುಖಮಾಡುತ್ತಿದೆ.

ಶಾಸಕ ರಘುಪತಿ ಭಟ್ ರವರಿಂದ ಪ್ರಾರಂಭವಾದ ಈ ಸಮಸ್ಯೆಯನ್ನು ಅವರೇ ಪರಿಹರಿಸಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದರು.