ಉಡುಪಿ: ದುರ್ಗಾ ದೌಡ್ನಲ್ಲಿ ತಲವಾರು ಪ್ರದರ್ಶನ : ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ SDPI ಸಹಿತ ಹಲವು ಸಂಘಟನೆಗಳ ಒತ್ತಾಯ- Vishwanews24
ಉಡುಪಿ: ದುರ್ಗಾ ದೌಡ್ನಲ್ಲಿ ತಲವಾರು ಪ್ರದರ್ಶನ : ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ SDPI ಸಹಿತ ಹಲವು ಸಂಘಟನೆಗಳ ಒತ್ತಾಯ
ಉಡುಪಿ: ಹಿಂದೂ ಜಾಗರಣ ವೇದಿಕೆಯ ವತಿಯಿಂದ ರವಿವಾರ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಕಾರ್ಯಕರ್ತರು ತಲವಾರು ಪ್ರದರ್ಶಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿವೆ. ಕಡಿಯಾಳಿಯಿಂದ ಆರಂಭಗೊಂಡ ಮೆರವಣಿಗೆಯು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಹಳೆಯ ಡಯಾನ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಸಮಾಪ್ತಿಗೊಂಡಿತ್ತು.
ಮೆರವಣಿಗೆಯ ಮುಂಭಾಗದಲ್ಲಿದ್ದ ಕೆಲವು ಕಾರ್ಯಕರ್ತರು ತಮ್ಮ ಕೈಯಲ್ಲಿ ತಲವಾರು ಹಿಡಿದುಕೊಂಡಿದ್ದರು. ದುರ್ಗಾ ದೌಡ್ ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಖಂಡನೀಯ. ಇದು ಸಂವಿಧಾನ ವಿರೋಧಿಯಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ಸಂಘಟಕರು ಹಾಗೂ ತಲವಾರು ಪ್ರದರ್ಶನ ಮಾಡಿರುವವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ದಸಂಸ ಬೇಡ್ಕರ್ ವಾದ, ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲಾ ಘಟಕ ,ಎಸ್ ಡಿಪಿ ಐ ಸಹಿತ ಹಲವು ಸಂಘಟನೆಗಳು ಒತ್ತಾಯಿಸಿವೆ.

ಮೆರವಣಿಗೆಯಲ್ಲಿ ಸಚಿವ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್ ಸಹಿತ ಬಿಜೆಪಿಯ ಬಹುತೇಕ ಮುಖಂಡರಿದ್ದರು.
