ಉಡುಪಿ ಮರಳುಗಾರಿಕೆ ಸಮಸ್ಯೆ ; ಹೃದಯಾಘಾತದಿಂದ ವ್ಯಕ್ತಿ ಸಾವು

Featured, ಉಡುಪಿ
ಉಡುಪಿ: ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಿದ ಕಾರಣ ನಿರ್ಮಾಣ ಕಾಮಗಾರಿಗೆ ಸಂಕಷ್ಟ ಎದುರಾಗಿದ್ದು ವಿವಿಧ ಕಟ್ಟಡ ನಿರ್ಮಾಣ ಗುತ್ತಿಗೆದಾರರು, ನೌಕರರು ಇದರ ವಿರುದ್ಧ ಬೀದಿಗಿಳಿದಿದ್ದಾರೆ. ಹೀಗೆ ಮರಳು ಹೋರಾಟದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮರಳು ಗಣಿಗಾರಿಕೆಗೆ ಅನುಮತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದ ಕಾಪುವಿನ ಹೆಜಮಾಡಿ ಗ್ರಾಮದ ನಿವಾಸಿ ಮಹಮ್ಮದ ಹನೀಫ್ (42) ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಮರಳುಗಾರಿಕೆಗೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಹನೀಫ್ ಬಾಗವಹಿಸಿದ್ದ ವೇಳೆ ಇದ್ದಕ್ಕಿದ್ದಂತೆ ಉದ್ವೇಗಕ್ಕೆ ಒಳಗಾಗಿದ್ದಾರೆ. ಈ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮಣಿಪಾಲದ ಕೀಂಸಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲ ನೀಡದ ಕಾರಣ ಸಾವನ್ನಪ್ಪಿದ್ದಾರೆ.
3 ಮಕ್ಕಳು ಮತ್ತು ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ಹನೀಫ್ ವಾಸಿಸುತ್ತಿದ್ದರು, ಮರಳುಗಾರಿಕೆ ನಂಬಿ ಸಾಲ ಮಾಡಿಕೊಂಡಿದ್ದ ಹನೀಫ್ ಗೆ ಇತ್ತೀಚೆಗೆ ಸಾಲಗಾರರ ಕಾಟ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.
ಹನೀಫ್ ಸುಮಾರು 6 ಲಕ್ಷ ರೂ. ಸಾಲ ಮಾಡಿ ಎರಡು ನಾಡದೋಣಿ ಖರೀದಿಸಿ ಮರಳುಗಾರಿಕೆ ನಡೆಸುತ್ತಿದ್ದರು. ಇದೀಗ ಜಿಲ್ಲೆಯಾದ್ಯಂತ ಮರಳುಗಾರಿಕೆ ಸಂಪೂರ್ಣ ಸ್ಥಗಿತವಾಗಿದ್ದು ಯಾವುದೇ ಕಾರಣಕ್ಕೆ ನದಿಯಿಂದ ಮರಳು ತೆಗೆವಂತಿಲ್ಲ ಎಂದ್ಬ ಸರ್ಕಾರ ಆದೇಶದಿಂದ ಕೆಲಸವಿಲ್ಲದೆ ಕುಳಿತಿದ್ದರು. ಇದೇ ಕಾರಣದಿಂದ ಪ್ರತಿಭಟನೆ ವೇಳೆ ಉದ್ವೇಗಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.