ಉಡುಪಿ : ಶಂಕರಪುರ ಮಲ್ಲಿಗೆ ಹೂವಿನ ಗರಿಷ್ಠ ದರ 1,250 ರೂ. ಗಳಿಂದ 2,100 ರೂ. ಗಳಿಗೆ ಏರಿಕೆ : ಡಿ. 23ರಿಂದ ಜಾರಿಗೆ – Vishwanews24

Featured, ಉಡುಪಿ

ಉಡುಪಿ : ಶಂಕರಪುರ ಮಲ್ಲಿಗೆ ಹೂವಿನ ಗರಿಷ್ಠ ದರ 1,250 ರೂ. ಗಳಿಂದ 2,100 ರೂ. ಗಳಿಗೆ ಏರಿಕೆ : ಡಿ. 23ರಿಂದ ಜಾರಿಗೆ – Vishwanews24

ಉಡುಪಿ,: ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಕೃಷಿ ಕೂಡಾ ಪ್ರಮುಖವಾದದ್ದು, ಇಲ್ಲಿ ಮಲ್ಲಿಗೆ ಕೃಷಿಯನ್ನೇ ನಂಬಿ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ಇದೀಗ ಮಲ್ಲಿಗೆ ದರದಲ್ಲಿ ಏರಿಕೆ ಕಂಡಿದ್ದು ಜಿಲ್ಲಾ ಕೃಷಿಕ ಸಂಘವು ಸಂತಸ ವ್ಯಕ್ತಪಡಿಸಿದೆ.

ಡಿ.23 ರಿಂದ ಅನ್ವಯವಾಗುವಂತೆ ಶಂಕರಪುರದ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಮಲ್ಲಿಗೆ ಹೂವಿನ ದರವನ್ನು ಅಟ್ಟಿಗೆ (3200 ಬಿಡಿ ಹೂವು) 2,100ರೂ.ಗಳಿಗೆ ಏರಿಸಿ ದರ ನಿಗದಿ ಪಡಿಸಿದೆ. ಇದೀಗ ದರ ನಿಗದಿ ಕೇಂದ್ರದ ಕ್ರಮವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘವು ಸ್ವಾಗತಿಸಿದ್ದು, ಸದ್ಯದ ವಿಪರೀತದ ಹವಾಮಾನ ಸ್ಥಿತಿಯಲ್ಲಿ ಈ ಮಲ್ಲಿಗೆ ಬೆಳೆಗಾರ ಕುಟುಂಬಗಳು, ಗಿಡಗಳು ಹಾನಿಗೊಳಗಾಗಿ ಹೂವಿನ ಇಳುವರಿ ಕುಂಠಿತವಾಗಿ ರುವುದರಿಂದ ತೀರಾ ಸಂಕಷ್ಟ ಪರಿಸ್ಥಿತಿಯಲ್ಲಿವೆ. ಇದರ ಜತೆಯಲ್ಲಿ ನಿರ್ವಹಣಾ ವೆಚ್ಚ, ಸಾಗಾಟದ ವೆಚ್ಚಗಳೂ ಏರಿರುವ ಪರಿಸ್ಥಿತಿ ಯಲ್ಲಿ ಮಲ್ಲಿಗೆ ಹೂವಿನ ದರ ಏರಿಕೆ ಸಮಂಜಸವಾಗಿದೆ ಎಂದು ಸಂಘ ಅಭಿಪ್ರಾಯ ಪಟ್ಟಿದೆ.

ಅಲ್ಲದೆ ಯಾವುದೇ ಹೂವಿನ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶಕ್ಕೇ ಮಾದರಿಯಾಗಿ, ಕಳೆದ 80 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಯಾವುದೇ ಒಳ ಒಪ್ಪಂದಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ, ಸರ್ವಸಮ್ಮತವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.

ಎಲ್ಲೆಡೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿ ಕೃಷಿಕರನ್ನು ಶೋಷಣೆ ಮಾಡುವವರೇ. ಕೃಷಿಕರಿಗಿಂತ ತಮ್ಮ ಹಿತಾಸಕ್ತಿಗಾಗಿ ಕೃಷಿಕರನ್ನು ಬಳಸಿಕೊಳ್ಳುತ್ತಾರೆ. ಇಂತಹವರ ನಡುವೆ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರ ಮಾತ್ರ ಕೃಷಿಕರ ಹಿತಾಸಕ್ತಿಯನ್ನೇ ಮಾನದಂಡವಾಗಿಟ್ಟುಕೊಂಡು, ಮಲ್ಲಿಗೆ ಬೆಳೆಗಾರರಿಂದ ಹಿಡಿದು, ಹೂವನ್ನು ಕೊಯ್ದು, ಸಂಗ್ರಹ ಮಾಡಿ ಮಾರುಕಟ್ಟೆಗೆ ಒಯ್ಯುವ ತನಕದ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ದರ ಏರಿಸಿದೆ ಎಂದು ಸಂಘವು ಬೆಲೆ ಏರಿಕೆ ಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ: 4 ಮತ್ತು 5ನೇ ಪ್ಲಾಟ್‌ಫಾರಂ ಸೆಪ್ಟಂಬರ್‌ ವೇಳೆಗೆ ಸಿದ್ಧ – Vishwanews24