ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಪವರ್ ಸ್ಟಾರ್ ..-Vishwanews24
ಉಡುಪಿ, : ಕನ್ನಡ ಚಲನಚಿತ್ರ ನಟ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು ಬೆಳಗ್ಗೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆ.
ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ, ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.
ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಿಸಲಾಗುತ್ತಿದ್ದು, ಚಿನ್ನದ ತಗಡನ್ನು ಮಾಡಲು ರಾಜಕೋಟ್ ನಿಂದ ತರಿಸಿದ ನೂತನ ರೋಲಿಂಗ್ ಯಂತ್ರಕ್ಕೆ ಸ್ವಿಚ್ ಹಾಕುವುದರೊಂದಿಗೆ ಪುನೀತ್ ರಾಜ್ಕುಮಾರ್ ಚಾಲನೆ ನೀಡಿದರು. ಹಾಗೆಯೇ ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ಪರ್ಯಾಯ ಪಲಿಮಾರು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸುವರ್ಣ ಗೋಪುರದ ಮಾದರಿಯನ್ನು ಉದ್ಘಾಟಿಸಿದರು.



ಈ ಸಂದರ್ಭ ಕಡಗೋಲು ಕೃಷ್ಣ, ಮುಖ್ಯಪ್ರಾಣರ ದರ್ಶನ ಮಾಡಿದ ಪುನೀತ್ ,ಈ ಹಿಂದೆ ಅಪ್ಪಾಜಿ ಜೊತೆ ಹಲವು ಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೆ. ಆ ದಿನಗಳು ಯಾವತ್ತಿಗೂ ಮರೆಯಲಾಗದು ಎಂದು ತಂದೆ ಜೊತೆ ಕೃಷ್ಣ ಮಠಕ್ಕೆ ಆಗಮಿಸಿದ ದಿನಗಳನ್ನು ನೆನೆಪಿಸಿಕೊಂಡರು.
ತನ್ನ ನೂತನ ಚಲನಚಿತ್ರ ‘ನಟಸಾರ್ವಭೌಮ’ವನ್ನು ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ಪುನೀತ್ ಕೃತಜ್ಞತೆ ಸಲ್ಲಿಸಿದರು.
