ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು – vishwanews24

Featured, ಉಡುಪಿ

ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರವಾರ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಾರವಾರದ ದಿವ್ಯಾ (45) ಮೃತ ದುರ್ದೈವಿ.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದ ಪುತ್ರಿಯನ್ನು ದಿವ್ಯಾ ಅವರು ಕಾರಿನಲ್ಲಿ ಕಾರವಾರಕ್ಕೆ ಕರೆದೊಯ್ಯುತ್ತಿದ್ದರು. ಸಂಜೆ ವೇಳೆ ಉಪಾಹಾರಕ್ಕಾಗಿ ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ ಪಡೆದು ಗುಡ್ಡೆಯಂಗಡಿಯ ಹೋಟೆಲ್‌ವೊಂದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಪುತ್ರಿ ತನಗೆ ಕ್ರಿಕೆಟ್ ಬ್ಯಾಟ್ ಬೇಕೆಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಮಗಳ ಆಸೆಯಂತೆ ಬ್ಯಾಟ್ ಕೊಡಿಸಲು ರಸ್ತೆಯ ಮತ್ತೊಂದು ಬದಿಗೆ ತೆರಳಲು ದಿವ್ಯಾ ಅವರು ಹೆದ್ದಾರಿ ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೇನ್ ಅಕಸ್ಮಾತ್ ಢಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಖಾಸಗಿ ವಾಹನದಲ್ಲಿ ದಿವ್ಯಾ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply