ಉಳ್ಳಾಲ : ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ – vishwanews24
ಉಳ್ಳಾಲ : ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ
ಮಂಗಳೂರು : ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀರ್ ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ರಾತ್ರಿ 10ರ ಸುಮಾರಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಸಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಅಪಾಯವನ್ನು ಅರಿತ ಸಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿ, ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ನಿನಿಂದ 500 ಮೀ ದೂರದಲ್ಲಿರುವ ವಿ.ಕೆ.ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕಡಿದು ಹತ್ಯೆ ನಡೆಸಿದೆ.
2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ನನ್ನು ಜೆಪ್ಪುವಿನ ಫ್ಲಾಟ್ವೊಂದರಲ್ಲಿ ದಾವುದ್, ಶಮೀರ್, ರಿಯಾಝ್, ನಮೀರ್ , ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಹತ್ಯೆ ನಡೆಸಿದ್ದರು. ಪ್ರಕರಣದಲ್ಲಿ ಶಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಶಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್ ನನ್ನು ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾದ ಶಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
