ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

Featured, ದಕ್ಷಿಣ ಕನ್ನಡ

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್

ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ ಎಚ್ಚರ ತಪ್ಪಿದರೆ ಅದು ಯಾವತ್ತಿಗೂ ಜೀವಂತ ಜ್ವಾಲಾಮುಖಿಯಾಗಬಲ್ಲದು. ಹಾಗಾಗಿ ಅಲ್ಲಿ ದುಡಿಯುವ ಕಾರ್ಮಿಕ ವರ್ಗದ ಹಿತರಕ್ಷಣೆ, ಜಿಲ್ಲೆಯ ಜನರ ಸುರಕ್ಷತೆಯನ್ನು ಸಂಸ್ಥೆ ಖಾತರಿಪಡಿಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಾಕೀತು ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸಿಎಚ್‌ಟಿಯು ಘಟಕದಲ್ಲಿ ಸಂಭವಿಸಿದ ಬೆಂಕಿ ದುರಂತ ಭಾರೀ ಅಪಾಯದ ಆತಂಕವನ್ನು ನೀಡಿದ್ದು, ಒಂದು ವೇಳೆ ಅಮೋನಿಯ ಅಥವಾ ನಾಫ್ತಾ ತಯಾರಾಗುತ್ತಿದ್ದ ಘಟಕದಲ್ಲಿ ಆ ಘಟನೆ ನಡೆದಿದ್ದರೆ ಜಿಲ್ಲೆಯ ಪರಿಸ್ಥಿತಿ ಹೇಗಿರುತ್ತಿತ್ತು ಎಂದವರು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ :

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಸಂಸ್ಥೆಯಲ್ಲಿ ಗುತ್ತಿಗೆ ನೌಕರರ ಜತೆ ಬೇಜವಾಬ್ಧಾರಿಯಿಂದ ನಡೆದುಕೊಳ್ಳಲಾಗುತ್ತಿದ್ದು, ಬ್ರಿಟಿಷರ ಕಾಲದ ಕಾನೂನನ್ನು ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.

ಅಲ್ಲಿರುವ ಶೌಚಾಲಯ ಗುತ್ತಿಗೆ ಕಾರ್ಮಿಕರು ಬಳಸುವಂತಿಲ್ಲ. ಮಹಿಳಾ ಕಾರ್ಮಿಕರಿಗೆ ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆ ಹಾಗೂ ವಿಶ್ರಾಂತಿ ಕೊಠಡಿ ಇಲ್ಲ. ಧ್ವನಿ ಎತ್ತಿದರೆ ಅಂತಹ ಕಾರ್ಮಿಕರನ್ನು ರೊಟೇಶನ್ ನೆಪದಲ್ಲಿ ಬೇರೆಡೆ ಕಳುಹಿಸುವ ಕಾರ್ಯ ನಡೆಯುತ್ತದೆ. ಸುರಕ್ಷತೆಯ ಹೆಸರಿನಲ್ಲಿ ಕಾರ್ಮಿಕರು ಮೊಬೈಲ್ ಬಳಸಲು ಅವಕಾಶವಿಲ್ಲ. ಆದರೆ ಯಾವುದೇ ಸುರಕ್ಷತೆಯ ಮಾನದಂಡಗಳನ್ನು ಅನುಸರಿಸದೆ ಅಲ್ಲಿನ ಖಾಯಂ ನೌಕರರು ಮೊಬೈಲ್ ಫೋನ್ ಬಳಸುತ್ತಾರೆ ಎಂದು ದೂರಿದ ಅವರು, ಗುತ್ತಿಗೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಮೌಲ್ಯ ಆರೋಗ್ಯ ವಿಮೆ ತಕ್ಷಣಕ್ಕೆ ಜಾರಿ ಆಗುವಂತೆ ಸಂಸ್ಥೆ ಕ್ರಮ ವಹಿಸಬೇಕು. ಗುತ್ತಿಗೆ ಕಾರ್ಮಿಕರ ಪರಿಹಾರ ಮೊತ್ತವನ್ನು 25 ಲಕ್ಷಕ್ಕೆ ಏರಿಸಬೇಕು. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಮೃತಪಟ್ಟರೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ :

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಕಳೆದ ಸುಮಾರು 15 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ವಿದ್ಯಾರ್ಹತೆಯ ಸಬೂಬು ನೀಡಿ ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿದೆ. ಅಂತಹ ಕಾರ್ಯ ಮಾಡದೆ ಕಂಪನಿ ವತಿಯಿಂದಲೇ ಸೂಕ್ತ ತರಬೇತಿ ನೀಡಿ ಅವರನ್ನು ಅದೇ ಕೆಲಸದಲ್ಲಿ ಮುಂದುವರಿಸಬೇಕು. ಇತ್ತೀಚಿನ ದುರ್ಘಟನೆಯ ಬಳಿಕ ಪರಿಸರದ ಜನರು ಜೀವಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ಉದ್ಯೋಗ ಇಲ್ಲವಾಗಿದೆ. ಈ ಸಮಸ್ಯೆ ನಿವಾರಿಸಲು ಸಂಸ್ಥೆಯ ಪ್ರಮುಖರ ಜತೆಗೆ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ನಮ್ಮನ್ನು ಸೇರಿಸಿಕೊಂಡು ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಸಭೆ ನಡೆಸಬೇಕು. ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರ ಕೂಡಾ ಈ ಬಗ್ಗೆ ಗಮನ ಹರಿಸಬೇಕು. ನಾವು ಆಗ್ರಹಿಸಿರುವ ಬೇಡಿಕೆಗಳನ್ನು ಈಡೇರಿಸುವುದು, ಸಮಸ್ಯೆಗಳನ್ನು ಇತ್ಯರ್ಥಗೊಳಿಸುವವ ಕುರಿತಂತೆ ಒಂದು ವಾರದೊಳಗೆ ಸ್ಪಷ್ಟ ಉತ್ತರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಎಂಆರ್‌ಪಿಎಲ್ ಚಲೋದಂತಹ ಹೋರಾಟ ನಡೆಸಬೇಕಾಬಹುದು ಎಂದು ಅವರು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕೆಪಿಟಿಎಂಎಸ್‌ನ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸುವರ್ಣ, ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ ಶಶಿರಾಜ್ ಶೆಟ್ಟಿ, ತುಳುನಾಡು ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್, ಅಮರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ :

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

Leave a Reply