ಏರೋ ಇಂಡಿಯಾ-2023: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ – Vishwanews24

Featured, ರಾಜ್ಯ ನ್ಯೂಸ್

ಏರೋ ಇಂಡಿಯಾ-2023: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ.

5 ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು ಮೋದಿಯವರು 2ನೇ ಬಾರಿ ಉದ್ಘಾಟಿಸಿದ್ದಾರೆ. ಮುಂದಿನ 5 ದಿನಗಳ ಕಾಲ ಸಿಲಿಕಾನ್ ಸಿಟಿಯ ನಭದಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿರಲಿದೆ. 2015ರಲ್ಲೂ ಮೋದಿಯವರು ಏರೋ ಇಂಡಿಯಾವನ್ನು ಉದ್ಘಾಟಿಸಿದ್ದರು.

ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.3ರಷ್ಟು ವಿಸ್ತಾರಗೊಳಿಸಿಕೊಂಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬರುವ ನಿರೀಕ್ಷೆಗಳಿವೆ.

2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ 55 ರಾಷ್ಟ್ರಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ರಾಷ್ಟ್ರಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ.

ಕಳೆದ ಬಾರಿ 67 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್, ಸೂರ್ಯಕಿರಣ್ ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೇಲ್, ತೇಜಸ್ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ವ್ಯಾಟಿಕ್ ಡಿಸ್ ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.

 

Leave a Reply