ಒಂದು ವೇಳೆ ಬಿಜೆಪಿ ಬಹುಮತದಿಂದ ವಂಚಿತವಾದರೆ ಸರಕಾರ ರಚಿಸಲು ನಾವು ಕೈ ಜೋಡಿಸುತ್ತೇವೆ..

Featured, ರಾಜ್ಯ ನ್ಯೂಸ್

ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಗೆ ತಮ್ಮ ಪಕ್ಷ ಮುಕ್ತವಾಗಿದೆ, ಎಂದು ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಹೇಳಿದ್ದಾರೆ. ಮೂಲಗಳ ಪ್ರಕಾರ, ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ರಾವ್, ಗಂಟೆಗೂ ಹೆಚ್ಚು ಕಾಲ 2019ರ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಚುನಾವಣಾ ಪೂರ್ವ ಮೈತ್ರಿ ನಮ್ಮ ಪಕ್ಷಕ್ಕೆ ಯಾವುದೇ ಪ್ರಯೋಜನ ತರದು. ಒಂದು ವೇಳೆ ಬಿಜೆಪಿ ಬಹುಮತದಿಂದ ವಂಚಿತವಾದರೆ ಸರಕಾರ ರಚಿಸಲು ನಾವು ಕೈ ಜೋಡಿಸುತ್ತೇವೆ ಎಂದು ರಾವ್ ಭೇಟಿ ವೇಳೆ ವಾಗ್ದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮತದಾನ ಪ್ರಕ್ರಿಯೆಯಿಂದ ದೂರ ಸರಿಯುವ ಮೂಲಕ ಪರೋಕ್ಷವಾಗಿ ಟಿಆರ್‌ಎಸ್‌ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಎನ್ ಡಿಎ ಮೈತ್ರಿಕೂಟದದಿಂದ ಟಿಡಿಪಿ ಹಿಂದೆ ಸರಿದ ಬಳಿಕ ಬಿಜೆಪಿ ಈಗ ಟಿಆರ್ ಎಸ್‌ನೊಂದಿಗೆ ನಿಕಟತೆ ಹೊಂದಲು ಯತ್ನಿಸುತ್ತಿದೆ ಎನ್ನಲಾಗಿದೆ.