ಒಲಿಂಪಿಕ್ ಬ್ಲೇಜರ್ ಕಳವು ಮಾಡಿದ ಮಾನಗೆಟ್ಟವರು : ಎಫ್‌ಐಆರ್ ದಾಖಲು

Featured, ರಾಷ್ಟ್ರ ನ್ಯೂಸ್

ಪಟಿಯಾಲ: ಹಿರಿಯ ಹಾಕಿ ಆಟಗಾರ ಬಲಬೀರ್‌ ಸಿಂಗ್‌ ಅವರ ಒಲಿಂಪಿಕ್ ಬ್ಲೇಜರ್‌ ಕಳವಾಗಿದ್ದು, ಈ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸಿಂಗ್‌ ಅವರು 1956ರ ಮೆಲ್ಬರ್ನ್‌ ಒಲಿಂಪಿಕ್‌ನಲ್ಲಿ ತಮಗೆ ದೊರೆತಿದ್ದ ಬ್ಲೇಜರ್‌ ಅನ್ನು 1985ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಆಗಿನ ಕಾರ್ಯದರ್ಶಿಗೆ ಕಾಣಿಕೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ದೆಹಲಿಯಲ್ಲಿ ರಾಷ್ಟ್ರೀಯ ಕ್ರೀಡಾ ಮ್ಯೂಸಿಯಂ ಸ್ಥಾಪಿಸುವ ಪ್ರಸ್ತಾವನೆಯಿದ್ದು, ಇಲ್ಲಿ ಕ್ರೀಡಾಳುಗಳ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಆಗಿನ ಕಾರ್ಯದರ್ಶಿ ತಿಳಿಸಿದ್ದರು. ಆದ್ದರಿಂದ ಒಲಿಂಪಿಕ್ ಬ್ಲೇಜರ್‌, ಪದಕಗಳು ಹಾಗೂ ಇತರೆ ಸ್ಮರಣಿಕೆಗಳನ್ನು ಅವರಿಗೆ ನೀಡಿದ್ದೆ’ ಎಂದು 94 ವರ್ಷದ ಸಿಂಗ್‌ ಈ ಹಿಂದೆ ತಿಳಿಸಿದ್ದರು. ಆದರೆ ಅಂತಹ ಸಂಗ್ರಹಾಲಯ ಸ್ಥಾಪನೆಯೇ ಆಗಿಲ್ಲ.

2012ರಲ್ಲಿ ಲಂಡನ್‌ ಒಲಿಂಪಿಕ್ ವೇಳೆ ನಡೆಸುವ ಅಧಿಕೃತ ವಸ್ತುಪ್ರದರ್ಶನದಲ್ಲಿ ಇರಿಸುವ ಸಲುವಾಗಿ, ಈ ವಸ್ತುಗಳಿಗಾಗಿ ಒಲಿಂಪಿಕ್ಸ್‌ ಸಂಗ್ರಹಾಲಯ ಮನವಿ ಮಾಡಿತ್ತು. ಆದರೆ ಸಿಂಗ್‌ ಅವರು ನೀಡಿದ್ದರು ಎನ್ನಲಾದ ವಸ್ತುಗಳ ಕುರಿತು ಎಸ್‌ಎಐ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಎನ್ನುವುದು ಈ ವೇಳೆ ಬಹಿರಂಗವಾಗಿತ್ತು.

ಪ್ರಕರಣ ಕುರಿತು ತನಿಖೆ ನಡೆಸುವಂತೆ ರಾಷ್ಟ್ರೀಯ ಕ್ರೀಡಾ ಮಂಡಳಿಯ (ಎನ್‌ಐಎಸ್‌) ಪಟಿಯಾಲದ ನಿರ್ದೇಶಕರು ಪೊಲೀಸರಿಗೆ ಪತ್ರ ಬರೆದಿದ್ದರು.