ಕಂಪ್ಲಿ ಕಾಂಗ್ರೆಸ್​ ಶಾಸಕ ಗಣೇಶ್​ ಬಂಧನ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಬಿಡದಿ ಬಳಿಯ ಈಗಲ್​ಟೌನ್​ ರೆಸಾರ್ಟ್​ನಲ್ಲಿ ನಡೆದಿದ್ದ ಶಾಸಕ ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿಯ ಕಾಂಗ್ರೆಸ್​ ಶಾಸಕ ಜೆ.ಎನ್​. ಗಣೇಶ್ ಅವರನ್ನು ಗುಜರಾತ್​ನಲ್ಲಿ ಬಂಧಿಸಲಾಗಿದೆ.

ಆನಂದ್​ ಸಿಂಗ್​ ಮೇಲೆ ತೀವ್ರ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಗಣೇಶ್​ ಘಟನೆ ನಡೆದ ನಂತರ ತಲೆಮರೆಸಿಕೊಂಡಿದ್ದರು. ಗಣೇಶ್​ರನ್ನು ಬಂಧಿಸಲು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈಗ ಹಲ್ಲೆ ನಡೆದು ಬರೋಬ್ಬರಿ 1 ತಿಂಗಳ ಬಳಿಕ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದಾರೆ.

ಈ ನಡುವೆ ಗಣೇಶ್​ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಫೆ. 25 ಕ್ಕೆ ವಿಚಾರಣೆ ನಿಗದಿಪಡಿಸಿತ್ತು. ಆದರೆ ಮಂಗಳವಾರ ಗಣೇಶ್​ ಪರ ವಕೀಲರು ಜಾಮೀನು ಅರ್ಜಿ ವಾಪಸ್​ ಪಡೆದಿದ್ದರು ಎಂದು ತಿಳಿದು ಬಂದಿತ್ತು.

ಜನವರಿ 20ರಂದು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಅವರ ಮೇಲೆ ಅದೇ ಪಕ್ಷದ ಶಾಸಕ ಕಂಪ್ಲಿ ಗಣೇಶ್ ಹಲ್ಲೆ ನಡೆದಿದ್ದರು. ಪರಿಣಾಮ ಆನಂದ್ ಸಿಂಗ್ ಅವರ ಕಣ್ಣು, ಮುಖ, ತಲೆ ಹಾಗೂ ಕಿಬ್ಬೊಟ್ಟೆಗೆ ಗಾಯಗಳಾಗಿತ್ತು. ಅವರು ಬಳಿಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.ಹಲ್ಲೆ ನಡೆಸಿದ್ದ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.