ಕರಾವಳಿಯ ಯಕ್ಷಗಾನ ಕಲೆಗೆ ಆಕರ್ಷಿತರಾದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ -Vishwanews24
ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ಇದೀಗ ಈ ವಿಶಿಷ್ಟ ಕಲೆಗೆ ಖ್ಯಾತ ಮಾಜಿ ಕ್ರಿಕೆಟರ್ ಹಾಗೂ ಲೆಗ್ ಸ್ಪಿನ್ನರ್ ಆಗಿರುವ ಬ್ರಾಡ್ ಹಾಗ್ ಆಕರ್ಷಿತರಾಗಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ ವೀಕ್ಷಕ ವಿವರಣೆಗೆ ಬೆಂಗಳೂರಿಗೆ ಆಗಮಿಸಿದ್ದ ಬ್ರಾಡ್ ಹಾಗ್, ಇಲ್ಲಿನ ವಿವಿ ಪುರಂ ಕಾಲೇಜಿನಲ್ಲಿ ಭಾನುವಾರ ನಡೆಯುತ್ತಿದ್ದ ಯಕ್ಷಗಾನ ತರಬೇತಿ ಶಿಬಿರಕ್ಕೂ ಭೇಟಿ ನೀಡಿ ಚೆಂಡೆ ನುಡಿಸಿ, ಕುಣಿತ ಕಲಿಯಲೂ ಪ್ರಯತ್ನಿಸಿ ಎಲ್ಲರನ್ನೂ ಬೆರಗುಗೊಳಿಸಿದರು.
ವಿವಿಪುರಂ ಕಲಾ ಕಾಲೇಜಿನಲ್ಲಿ ಕರಾವಳಿ ಕಲಾ ಪ್ರತಿಷ್ಠಾನದ ಸತೀಶ್ ಅಗ್ಪಲ ನೇತೃತ್ವದಲ್ಲಿ ನಡೆಯುವ ಸಂಕೃತಿ ಯಕ್ಷಾನುಭವ ತಂಡದಿಂದ ಯಕ್ಷಗಾನ ತರಬೇತಿ ನಡೆಯುತ್ತಿತ್ತು. ಈ ವೇಳೆ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದುದನ್ನು ಗಮನಿಸಿದ ಬ್ರಾಡ್ ಹಾಗ್, ತಮಗೂ ಕಲಿಸುವಂತೆ ಕೇಳಿಕೊಂಡರು. ಬಳಿಕ ತಾನೂ ಕೂಡ ಯಕ್ಷಗಾನದ ತಾಳಕ್ಕೆ ಅನುಗುಣವಾಗಿ ಹೆಜ್ಜೆಯನ್ನೂ ಹಾಕಿ ಸಂಭ್ರಮಿಸಿದರು.
ಕರಾವಳಿಯ ಸರ್ವಾಂಗೀಣ ಕಲೆಯಾದ ಯಕ್ಷಗಾನದ ಕುಣಿತದ ಅಭ್ಯಾಸವನ್ನು ನೋಡಿ ಆನಂದಿಸಿದರಲ್ಲದೆ, ಅದರ ಆಕರ್ಷಣೆಗೆ ಮಾರುಹೋಗಿ, ತಾವೂ ಕುಣಿಯುವ ಬಯಕೆ ವ್ಯಕ್ತಪಡಿಸಿದರು.
ಹಿರಿಯ ಮದ್ದಳೆಗಾರರಾದ ಅಡೂರು ಮೋಹನ ಸರಳಾಯ ಅವರಿಂದ ಚೆಂಡೆ ನುಡಿಸುವ ಮಾಹಿತಿ ಪಡೆದ ಹಾಗ್, ತೆಂಕಿನ ಚೆಂಡೆಯನ್ನು ಹೆಗಲಿಗೇರಿಸಿ ತಾನು ಚೆಂಡೆ ನುಡಿಸಿದರು. ಬ್ರಾಡ್ ಹಾಗ್ ಚೆಂಡೆ ನುಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟಿಗ ಬ್ರಾಡ್ ಹಾಗ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಆಸ್ಥೆಯುಳ್ಳವರಾಗಿದ್ದು, ಕಲೆಯ ಮೇಲಿನ ಅಭಿಮಾನದ ದರ್ಶನವಾಯಿತು. ಅವರಿಗೆ ನಾಟ್ಯ ಮತ್ತು ಲಯದ ಹಿಡಿತವಿದೆ ಎಂಬುದು ಅವರ ಕಲಿಕೆಯನ್ನು ನೋಡಿಯೇ ತಿಳಿಯಿತು. ಕಲಿಕೆಯಲ್ಲಿ ತೋರಿದ ಉತ್ಸಾಹ ಮತ್ತು ಅವರೊಂದಿಗೆ ಯಕ್ಷಗಾನ ಕುರಿತು ಸಂವಹನ ನಡೆಸಿದ್ದು ಅವಿಸ್ಮರಣೀಯ. ಯಕ್ಷಗಾನವು ವಿಶ್ವಗಾನವಾಗುತ್ತಿರುವ ಬಗ್ಗೆ ಸಂತೋಷವಿದೆ.”-ಪ್ರಸಾದ್ ಚೇರ್ಕಾಡಿ, ಯಕ್ಷಗಾನ ಕಲಾವಿದ, ಗುರು
