ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಅವರಿಲ್ಲಾಂದ್ರೆ ಬಿಜೆಪಿ ಇಲ್ಲ : ವಾಟಾಳ್ ನಾಗರಾಜ್ -Vishwanews24
ಚಾಮರಾಜನಗರ: ಯಡಿಯೂರಪ್ಪ ನನ್ನ ನಂಬರ್ 1 ಶತ್ರು, ಆದರೆ ಅವರಿಲ್ಲ ಎಂದರೆ ಬಿಜೆಪಿ ಇಲ್ಲ , ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿಂದು ಬಿಎಸ್ವೈ ಅವರನ್ನು ತೆಗಳುವ ಮೂಲಕ ಹೊಗಳಿದರು.
ಬಂಡಿಪುರದ ಮದ್ದೂರು ಚೆಕಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಸರ್ಕಾರ ತಂದವರು ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ ಯಡಿಯೂರಪ್ಪ ನನ್ನ ನಂಬರ್ 1 ಶತ್ರು ನನ್ನ ಸೋಲಿಸಲು 10 ವರ್ಷಗಳ ಕಾಲ ನನ್ನ ವಿರುದ್ಧ ಅಭ್ಯರ್ಥಿಯನ್ನ ನಿಲ್ಲಿಸಿದರು. ಹಾಗಾಗಿ ನನಗೆ ಬಿಎಸ್ವೈ ನನಗೆ ಶತ್ರು. ಆದರೂ ರಾಜ್ಯದಲ್ಲಿ ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಈಶ್ವರಪ್ಪನೂ ಇಲ್ಲ, ಯಾವ ಅಪ್ಪನೂ ಇಲ್ಲಾ ಎಂದು ಒಂದು ಕಡೆ ತೆಗಳಿ ಮತ್ತೊಂದು ಕಡೆ ಹೊಗಳಿದರು.
ಇತ್ತ ದಸರಾ ಆಚರಣೆ ಕುರಿತು ಮಾತನಾಡಿ, ದಸರಾ ನಾಡಹಬ್ಬ. ಆದರೆ ಯಾವ ಸರ್ಕಾರ ಬರುವುದೋ ಆ ದಸರಾ ಆಗುತ್ತಿರುವುದು ಸರಿಯಲ್ಲ. ವಿಶ್ವವಿಖ್ಯಾತ ದಸರಾ ಬರಬರುತ್ತಾ ಮೈಸೂರಿಗೆ ಸೀಮಿತವಾಗುತ್ತಿದೆ. ಆದ್ದರಿಂದ ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಹೇಳಿದರು.’ಇಲ್ಲಿ ದರ್ಬಾರು, ಉತ್ತರ ಕರ್ನಾಟಕದಲ್ಲಿ ಕಣ್ಣೀರು’ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಯದುವಂಶಸ್ಥ ಯದುವೀರ್ ಬಿಡಬೇಕಿತ್ತು. ದಸರಾ ದರ್ಬಾರ್ ಬಿಟ್ಟು ಉತ್ತರ ಕರ್ನಾಟಕ ಜನರ ಸಮಸ್ಯೆ ಕೇಳಬೇಕಿತ್ತು .ಉತ್ತರ ಕರ್ನಾಟಕದ ಜನ ನೀರಿನಲ್ಲಿ ಮುಳುಗಿದ್ದಾರೆ ಎಂದರು.
ಪ್ರಧಾನಿ ಮೋದಿ ವೈಭವದಿಂದ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ, ಕರ್ನಾಟಕಕ್ಕೇ ಅವರು ಬರಲಿಲ್ಲ? ರಾಜ್ಯದವರನ್ನು ಗುಲಾಮರಂತೆ ಕಾಣುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ, ಉತ್ತರ ಕರ್ನಾಟಕಕ್ಕೆ ಅಗೌರವ ತೋರಿ ಪರಿಹಾರ ನೀಡದಿದ್ದರೆ ರಾಜ್ಯವೇ ಧಗಧಗ ಎನ್ನಲಿದೆ ಎಂದು ಎಚ್ಚರಿಸಿದರು. ಗಣಿ ಮಾಲೀಕರ ದರ್ಬಾರಿನಲ್ಲಿ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರದು ಎಂದು ಗುಡುಗಿದರು.
