ಕರ್ನಾಟಕ ಈಗ ‘ಕಾಂಗ್ರೆಸ್‌ ಮುಕ್ತ’ : ಶಾ

Featured, ರಾಜ್ಯ ನ್ಯೂಸ್

‘ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾದೇಶ ದೊರೆತಿದೆ. ಕರ್ನಾಟಕವು ಕಾಂಗ್ರೆಸ್‌ ಮುಕ್ತವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 122 ಸ್ಥಾನಗಳಿಂದ 78 ಸ್ಥಾನಗಳಿಗೆ ಕುಸಿದಿರುವ ಕಾಂಗ್ರೆಸ್‌ ಪಕ್ಷದ ಅರ್ಧಕ್ಕೂ ಅಧಿಕ ಸಚಿವರು ಸೋತಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಭಾರಿ ಅಂತರದಿಂದ ಸೋತಿದ್ದಲ್ಲದೆ, ಇನ್ನೊಂದು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಯಾವುದೇ ಆಯಾಮದಿಂದ ನೋಡಿದರೂ ಅಲ್ಲಿ ಕಾಂಗ್ರೆಸ್‌ ವಿರುದ್ಧದ ಜನಾದೇಶ ಹೊರಬಿದ್ದಿದೆ ಎಂದರು.

ಕಾಂಗ್ರೆಸ್‌ ಪಕ್ಷವು ಈಗ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಅತಿ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಕಳೆದುಕೊಂಡಿದ್ದಕ್ಕೆ ಸಂಭ್ರಮ ಆಚರಿಸಲಾಗುತ್ತಿದೆಯೇ ಎಂಬುದನ್ನು ಆ ಪಕ್ಷದ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು. ಜೆಡಿಎಸ್‌ ಸಹ ಕೇವಲ 37 ಕ್ಷೇತ್ರಗಳಲ್ಲಿ ಗೆದ್ದು ಸಂಭ್ರಮಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಚುನಾವಣೆಯಲ್ಲಿ ಗೆದ್ದಿರುವ ತಮ್ಮ ಶಾಸಕರನ್ನು ಪಂಚತಾರಾ ಹೋಟೆಲ್‌ಗಳಲ್ಲಿ ಬಂಧಿಸಿ ಇಟ್ಟಿರುವುದು ಪ್ರಜಾಪ್ರಭುತ್ವದ ಹರಣವಲ್ಲವೇ’ ಎಂದು ಪ್ರಶ್ನಿಸಿದ ಶಾ, ಒಂದೊಮ್ಮೆ ಆ ಪಕ್ಷಗಳ ಶಾಸಕರನ್ನು ಈಜುಗೊಳಕ್ಕೋ ಅಥವಾ ವಾಯು ವಿಹಾರಕ್ಕೋ ಹೊರಗೆ ಕಳುಹಿಸಿದ್ದರೆ, ರಾಜ್ಯದ ಜನರೇ ಅವರಿಗೆ ಬುದ್ಧಿ ಹೇಳಿ ಬಿಜೆಪಿಯನ್ನು ಬೆಂಬಲಿಸುವಂತೆ ಪ್ರೇರೇಪಿಸುತ್ತಿದ್ದರು ಎಂದರು.

‘40 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಗೆ 104 ಸ್ಥಾನ ನೀಡಿದ್ದಾರೆ. 10ರಿಂದ 12 ಕಡೆ ಬಿಜೆಪಿ ನೋಟಾ ಮತಗಳಿಗಿಂತಲೂ ಕಡಿಮೆ ಅಂತರದಲ್ಲಿ ಸೋತಿದೆ. ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸದೆ ರಾಜೀನಾಮೆ ಸಲ್ಲಿಸಿದ್ದರೂ ಕಾಂಗ್ರೆಸ್‌, ಜೆಡಿಎಸ್‌ ತಮ್ಮ ಶಾಸಕರನ್ನು ಕೂಡಿ ಹಾಕಿವೆ. ಇದು ಪ್ರಜಾಪ್ರಭುತ್ವವೇ’ ಎಂದು ಪ್ರಶ್ನಿಸಿದರು.

‘ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸದೇ ಇದ್ದಿದ್ದರೆ, ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತಿತ್ತು. ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರು ಹಕ್ಕು ಮಂಡಿಸದೇ ನಿದ್ರೆಗೆ ಜಾರಿದ್ದರು. ಆಗ ಅಲ್ಲಿನ ರಾಜ್ಯಪಾಲರು ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿದ್ದರು. ಈಗ ಕಾಂಗ್ರೆಸ್‌ ಅಲ್ಲಿನ ಉದಾಹರಣೆ ನೀಡುತ್ತಿರುವುದು ಸೂಕ್ತವಲ್ಲ’ ಎಂದು ದೂರಿದರು.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ದುರಾಡಳಿತದ ಬಗ್ಗೆಯೇ ಆರೋಪ ಮಾಡಿದ್ದ ಜೆಡಿಎಸ್‌, ಒಮ್ಮೆಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳಿರಲಿಲ್ಲ. ಆದರೂ ಅಧಿಕಾರದ ಆಸೆಯಿಂದ ಆ ಪಕ್ಷ ದಿಢೀರ್‌ ಅವರ ಪರ ವಾಲಿತು ಎಂದು ಟೀಕಿಸಿದರು.

‘ಬುಧವಾರ ನಡೆಯುವ ಮೈತ್ರಿ ಸರ್ಕಾರದ ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ, ಅಖಿಲೇಶ್‌ ಯಾದವ್‌, ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಹಿನ್ನಡೆ ಆಗಲಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕರ್ನಾಟಕದ ಲೋಕಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಏನು ಕೆಲಸ? ಮಧ್ಯಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ಗೆ, ಪಶ್ಚಿಮ ಬಂಗಾಳದಲ್ಲಿ ರಾಹುಲ್‌ ಗಾಂಧಿ ಅವರಿಗೆ ಏನು ಕೆಲಸ’ ಎಂದು ಅಮಿತ್‌ ಶಾ ಮರು ಪ್ರಶ್ನೆ ಎಸೆದರು.