ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಕೈತಪ್ಪುವ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ – vishwanews24
ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ದಿಢೀರ್ ತಿರುವು ಸಿಕ್ಕಿದ್ದು, ಸ್ವತಃ ಮಗನೇ ತಂದೆಯನ್ನು ಮುಗಿಸಲು 6 ಲಕ್ಷ ರೂ. ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭಯ ಮತ್ತು ಸಾಲದ ಸುಳಿಗೆ ಸಿಲುಕಿದ್ದ ಮಗ ಸುಬ್ರತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 5 ರಂದು ಕಾನ್ಪುರದ ಇಂದಿರಾ ನಗರದಲ್ಲಿರುವ ಸ್ವಂತ ಫ್ಲಾಟ್ನಲ್ಲಿ ವಿನೀತ್ ಅವರ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ನಡೆದ ದಿನ ಮಗ ಸುಬ್ರತ್ ತನ್ನ ಪತ್ನಿ ಶಾಲು ಜೊತೆ ಪಾರ್ಟಿಗೆ ಹೋಗಿ ತನಗೆ ಏನೂ ತಿಳಿಯದಂತೆ ನಾಟಕವಾಡಿದ್ದ. ಆರಂಭದಲ್ಲಿ ಪೊಲೀಸರು ವಿನೀತ್ ಅವರ ಸೊಸೆ ಶಾಲು ಹಾಗೂ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಮತ್ತು ಆತನ ಸಹಚರ ರಾಜ್ಕಿಶೋರ್ನನ್ನು ಬಂಧಿಸಿದ್ದರು. ಆದರೆ, ಕರೆ ದಾಖಲೆಗಳು (CDR) ಮತ್ತು ವೈಜ್ಞಾನಿಕ ಪುರಾವೆಗಳನ್ನು ಬೆನ್ನಟ್ಟಿದ ಪೊಲೀಸರಿಗೆ ಅಸಲಿ ಸೂತ್ರಧಾರ ಮಗನೇ ಎಂಬುದು ಖಚಿತವಾಯಿತು.
ಕುಂದಾಪುರ : ಹುಟ್ಟೂರಿಗೆ ತಲುಪಿದ ಅನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ – vishwanews24
ಕೊಲೆಗೆ ಕಾರಣವೇನು?
ವಿಚಾರಣೆ ವೇಳೆ ಸುಬ್ರತ್ ತಪ್ಪೊಪ್ಪಿಕೊಂಡಿದ್ದು, ಆಘಾತಕಾರಿ ಮಾಹಿತಿ ಹೊರಹಾಕಿದ್ದಾನೆ. ತಂದೆಗೆ ಹಲವು ಮಹಿಳೆಯರೊಂದಿಗೆ ನಂಟು ಇದ್ದು, ಅವರು ಬೇರೊಬ್ಬ ಮಹಿಳೆಯೊಂದಿಗೆ ವಾಸಿಸಲು ಹೋಗಿ ಇಡೀ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದುಕೊಡಬಹುದೆಂದು ಹೆದರಿದ್ದ. ತಂದೆ ತಿಂಗಳಿಗೆ 40,000 ರೂ. ಖರ್ಚಿಗೆ ಕೊಡುತ್ತಿದ್ದರೂ, ಸುಬ್ರತ್ ಮಾಡಿಕೊಂಡಿದ್ದ ಸಾಲದ ಇಎಂಐಕಂತುಗಳೇ ತಿಂಗಳಿಗೆ 55 ಸಾವಿರ ರೂ. ಇತ್ತು. ಹೀಗಾಗಿ ತಂದೆಯನ್ನು ಮುಗಿಸಿ ಆಸ್ತಿ ಕಬಳಿಸಲು ನಿರ್ಧರಿಸಿದ್ದ.
ತನ್ನ ಮಾಜಿ ಉದ್ಯೋಗಿ ವಿಶಾಲ್ಗೆ 6 ಲಕ್ಷ ರೂ. ನೀಡುವುದಾಗಿ ಹೇಳಿ ತಂದೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದ ಸುಬ್ರತ್, ಪೊಲೀಸರಿಗೆ ಸಿಕ್ಕಿಬಿದ್ದರೆ ತನ್ನ ಪತ್ನಿ ಶಾಲು ಅವರ ಹೆಸರನ್ನೇ ಹೇಳುವಂತೆ ತಾಕೀತು ಮಾಡಿದ್ದ. ಕೊಲೆಗೆ ಎರಡು ದಿನ ಮೊದಲು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ನಿಂದ ವಿಶಾಲ್ ಮತ್ತು ಸುಬ್ರತ್ ನಡುವೆ 6 ಬಾರಿ ಕರೆಗಳು ಹೋಗಿದ್ದವು. ಇಬ್ಬರ ಮೊಬೈಲ್ ಲೊಕೇಶನ್ಗಳು ಮತ್ತು ಡಿಲೀಟ್ ಆಗಿದ್ದ ಚಾಟ್ಗಳನ್ನು ಸೈಬರ್ ಪೊಲೀಸರು ರಿಕವರ್ ಮಾಡಿದಾಗ ಸಂಚು ಪೂರ್ಣವಾಗಿ ಬಯಲಾಯಿತು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.
ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ : ಸಿಎಂ ಡಿ.ಕೆ.ಶಿವಕುಮಾರ್ – vishwanews24
ಬಂಧಿತ ಸುಬ್ರತ್ ಮತ್ತು ಆತನ ಸಹಚರರ ವಿರುದ್ಧ ಐಪಿಸಿ/ಬಿಎನ್ಎಸ್ನ ಗಂಭೀರ ಕೊಲೆ ಮತ್ತು ಸುಪಾರಿ ಹತ್ಯೆಯ ಪಿತೂರಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
