ಕಾಪು: ವಿಶ್ವ ಛಾಯಾಗ್ರಹಕರ ದಿನಾಚರಣೆ : SKPA ಕಾಪು ವಲಯ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ -Vishwanews24
ಕಾಪು: ವಿಶ್ವ ಛಾಯಾಗ್ರಹಕರ ದಿನಾಚರಣೆ : SKPA ಕಾಪು ವಲಯ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ -Vishwanews24

ಕಾಪು: ಸೌತ್ ಕೆನರಾ ಪೋಟೊ ಗ್ರಾಫರ್ಸ್ ಅಸೋಸಿಯೇಶನ್ ಕಾಪು ವಲಯ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ನಡೆಯಿತು. ಈ ಸಂದರ್ಭ ಛಾಯಾಗ್ರಹಕರ ಕುಟುಂಬದ ಕೊರೊನಾ ವಾರಿಯರ್ಸ್ ಗೆ ಅವರ ಮನೆಗಳಲ್ಲಿ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಪು ವಲಯದ ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಬಾಲಕೃಷ್ಣ ಪೂಜಾರಿ ಅವರ ಪತ್ನಿ, ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಗೀತಾ ಬಾಲಕೃಷ್ಣ ಅವರನ್ನು ಅವರ ಉಚ್ಚಿಲದ ‘ಶ್ರೀ ಭಾಗ್ಯ’ ಮನೆಯಲ್ಲಿ ಸನ್ಮಾನಿಸಿದರೆ, ಬೆಳ್ಮಣ್ಣಿನ ಛಾಯಾಗ್ರಾಹಕ ವಿಲ್ಫ್ರೆಡ್ ಕ್ಯಾಸ್ತಲಿನೋ ಅವರ ಪತ್ನಿ ಜೇನ್ ಮೇವಿ ವೇಗಸ್ ಅವರನ್ನು ಬೆಳ್ಮಣ್ಣಿನ ಅವರ ಸ್ವಗೃಹದಲ್ಲಿ ಎಸ್‍ಕೆಪಿಎ ಕಾಪು ವಲಯದ ಅಧ್ಯಕ್ಷ ವೀರೇಂದ್ರ ಪೂಜಾರಿ ಮತ್ತು ಅವರ ತಂಡ ಸನ್ಮಾನಿಸಿದರು.
ಆಶಾ ಕಾರ್ಯಕರ್ತೆ ಗೀತಾ ಬಾಲಕೃಷ್ಣ ಪೂಜಾರಿ ಮಾತನಾಡಿ, ಕೋವಿಡ್ 19ನಿಂದ ಆಶಾ ಕಾರ್ಯಕರ್ತೆಯರನ್ನು ಸಮಾಜ ಗುರುತಿಸುವಂತಾಗಿದೆ. ಈಗ ಯಾರ ಮನೆಗೆ ಹೋದರೂ, ಅವರು ಆದರದಿಂದ ಬರಮಾಡಿ ಕೊಳ್ಳುತ್ತಾರೆ. ಅಂತೆಯೇ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. ಕಾಪು ವಲಯ ಎಸ್‍ಕೆಪಿಎ ಸಂಸ್ಥೆ ನಮಗೆ ಅನ್ನ ನೀಡುವ ಸಂಸ್ಥೆ. ಬೇರೆ ಯಾವುದೇ ಸಂಸ್ಥೆ ಸನ್ಮಾನಿಸಿದಾಗ ಕೊಡದ ಖುಷಿ, ಈಗ ಸಿಕ್ಕಿದೆ ಎಂದರು.
ಬಾಲಕೃಷ್ಣ ಪೂಜಾರಿ ಮಾತನಾಡಿ, ಕಾಪು ಎಸ್‍ಕೆಪಿಎ ಸಂಸ್ಥೆ ಮಾಡಿದ ಸನ್ಮಾನ ಅತೀವ ಸಂತಸ ತಂದಿದೆ. ನಾವು ನಿರೀಕ್ಷಿಸದೆ ಇದ್ದ ಸನ್ಮಾನ ನಮ್ಮ ಮನೆ ಬಾಗಿಲಿಗೆ ಬಂದಿದೆ ಎಂದರು.
ಈ ಸಂದರ್ಭ ಕಾಪು ವಲಯ ಎಸ್‍ಕೆಪಿಎ ಅಧ್ಯಕ್ಷ ವೀರೇಂದ್ರ ಪೂಜಾರಿ, ಕಾರ್ಯದರ್ಶಿ ಸಚಿನ್ ಉಚ್ಚಿಲ, ಕೋಶಾಧಿಕಾರಿ ಸುಜಿತ್ ಕಲ್ಲುಗುಡ್ಡೆ,ಪ್ರಮೋದ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
