ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ
ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ ಮಗನನ್ನೇ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ತೆಳ್ಳಾರು ದುರ್ಗಾ ಗ್ರಾಮದ ಪುಲ್ಲಾಟ್ ಎಂಬಲ್ಲಿ ಸೆ.28ರಂದು ನಡೆದಿದೆ.
ಗಾಯಗೊಂಡಿರುವ ಪುಲ್ಲಾಟ್ ನಿವಾಸಿ ಚಾಲ್ಸ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲ್ಸ್ಗೆ ಮದ್ಯಪಾನ ಮಾಡುವ ಚಟ ಇದ್ದು ಇವರ ಹೆಂಡತಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ತಾಯಿ, ತಂದೆ ಹಾಗೂ ಮಗಳೊಂದಿಗೆ ವಾಸವಾಗಿರುವ ಚಾಲ್ಸ್ ಅವರ ಹಳೆ ಮನೆಯ ಸಮೀಪದಲ್ಲಿಯೇ ತಂದೆ ಮಥಾಯ್ ಹೊಸ ಮನೆಯನ್ನು ಕಟ್ಟುತ್ತಿದ್ದರು.
ರಾತ್ರಿ ಹಳೆಯ ಮನೆಯಲ್ಲಿ ತಾಯಿ ತ್ರೆಸಿಯಾಮ್ ಜೊತೆ ಮಗ ಚಾಲ್ಸ್ ಹೊಸ ಮನೆಯನ್ನು ನನಗೆ ಬಿಟ್ಟು ಕೊಡ ಬೇಕೆಂದು ಜಗಳವಾಡುತ್ತಿದ್ದು, ಈ ವೇಳೆಗೆ ಮಥಾಯ್ ಜಗಳ ಬಿಡಿಸಲು ಬಂದರು. ಈ ವೇಳೆ ಆಯಾ ತಪ್ಪಿ ಕೆಳಗೆ ಬಿದ್ದ ಮಥಾಯ್, ನಂತರ ಹೊಸದಾಗಿ ಕಟ್ಟುತ್ತಿರುವ ಮನೆಯ ಶೆಡ್ ಮುಂದೆ ಕುಳಿತುಕೊಂಡಿದ್ದರು.
ಅಲ್ಲಿಗೆ ಬಂದ ಚಾಲ್ಸ್ ತಂದೆಗೆ ಹೊಡೆಯಲು ಬಂದನು. ಆಗ ತಂದೆ ಮಥಾಯ್ ಕತ್ತಿಯಿಂದ ಚಾಲ್ಸ್ನ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಕಡಿದು ಕೊಲೆಗೆ ಯತ್ನಿಸಿದರೆಂದು ದೂರಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಚಾಲ್ಸ್ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
