ಕುಂದಾಪುರ: ಜೋಡಿಮಕ್ಕಿ ಬಾಬುಶೆಟ್ಟಿ ಭೀಕರ ಕೊಲೆ ಪ್ರಕರಣ :13 ಮಂದಿ ಮೇಲೆ ಪ್ರಕರಣ ದಾಖಲು -Vishwanews24

Featured, ಉಡುಪಿ

ಕುಂದಾಪುರ: ಜೋರ್ಮಕ್ಕಿ ಬಾಬು ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿಮೂರು ಮಂದಿಯ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಸಂತೋಷ ಶೆಟ್ಟಿ, ತೇಜಪ್ಪ ಶೆಟ್ಟಿ, ಶೇಖರ ಶೆಟ್ಟಿ, ಪ್ರಕಾಶ್ ಶೆಟ್ಟಿ ಕೊಡ್ಲಾಡಿ, ಉದಯ ಶೆಟ್ಟಿ, ರವಿರಾಜ ಶೆಟ್ಟಿ, ನಾಗರಾಜ ದೇವಾಡಿಗ, ಸುಕೇಶ್ ಮೂಡುಬಗೆ, ಶಂಕರ ಶೆಟ್ಟಿ, ಸುರೇಶ್ ಶೆಟ್ಟಿ ಕೊಕ್ಕಡ, ಗೋಪಾಲ ಶೆಟ್ಟಿ ಅಸೋಡು, ಕುಷ್ಠಪ್ಪ ಶೆಟ್ಟಿ ಅಸೋಡು, ಪ್ರಸಾದ್ ಶೆಟ್ಟಿ ಸೇರಿ ಒಟ್ಟು ಹದಿಮೂರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಈ ಪೈಕಿ ಪ್ರಸಾದ್ ಎನ್ನುವಾತ ಕೊಲೆಯಾದ ಬಾಬು ಶೆಟ್ಟಿ ಸೋದರ.

ಕೊಲೆಯಾದ ಬಾಬು ಶೆಟ್ಟಿ ಅಕ್ಕ ಮತ್ತು ಬಾವನ ಜಮೀನಿನ ಕುಮ್ಕಿಗೆ (ಸ್ವಂತ ಜಮೀನಿಗೆ ತಾಗಿಕೊಂಡಿರುವ ಸರ್ಕಾರಿ ಜಾಗ) ಸಂಬಂಧಿಸಿದಂತೆ ವ್ಯಾಜ್ಯವಿತ್ತು. ಮಂಗಳವಾರ ಈ ವಿಚಾರದಲ್ಲೇ ಜಗಳವಾಗಿ, ಸೇರಿದ್ದ ಗುಂಪು ಬಾಬು ಶೆಟ್ಟಿಗೆ ಹಲ್ಲೆ ಮಾಡಿ ಕೊಂದಿರುವ ಸಾಧ್ಯತೆಯಿದೆ. ಹೀಗಂತ ಆರೋಪಿಸಿ ಬಾಬು ಶೆಟ್ಟಿಯ ಸಹೋದರ ಪ್ರಕಾಶ್ ಶೆಟ್ಟಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 13 ಮಂದಿಯನ್ನು ಆರೋಪಿಗಳೆಂದು ಕೇಸು ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ರಾಜೇಶ್ ಮಾತನಾಡಿ, ಈ ಘಟನೆಯ ಬಳಿಕ ಭಯದ ವಾತಾವರಣ ಶುರುವಾಗಿದೆ. ಇಲ್ಲಿ ರಸ್ತೆಯಿಲ್ಲ, ದಾರಿದೀಪ ಇಲ್ಲ. ಅಲ್ಲಲ್ಲಿ ಮನೆಗಳು ಇರುವುದರಿಂದ ಓಡಾಟ ಕೂಡ ಕಷ್ಟಕರ ಪರಿಸ್ಥಿತಿಯಾಗಿದೆ. ಪೊಲೀಸರು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಕರಣದ ವಿವರ:
ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಬೈಕ್‌ನಲ್ಲಿ ತೆರಳಿದ್ದ ಕೆಲವೇ ಹೊತ್ತಿನಲ್ಲಿ ಬಾಬು ಶೆಟ್ಟಿಯವರ ಹತ್ಯೆ ನಡೆದಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಗೇರು ಹಾಡಿಯೊಂದರ ಬಳಿಯಲ್ಲಿ ರಕ್ತ ಸಿಕ್ತ ದೇಹ ಬಿದ್ದಿದ್ದರೇ, ಅವರ ಬೈಕ್ ಗೇರು ತೋಪಿನ ಇನ್ನೊಂದು ತುದಿಯನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಿದ್ದಿತ್ತು. ಹತ್ಯೆಯಾದ ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗುರುತುಗಳು ಪತ್ತೆಯಾಗಿದ್ದು, ಕೊಲೆಯ ಭೀಕರತೆಯನ್ನು ಎತ್ತಿತೋರಿಸಿತ್ತು.