ಕುವೈಟ್‌: 13,000 ಭಾರತೀಯ ಎಂಜಿನಿಯರ್‌ ನೌಕರಿಗೆ ಕತ್ತರಿ?

Featured, ಅಂತಾರಾಷ್ಟ್ರೀಯ ನ್ಯೂಸ್

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕರ್ನಾಟಕದವರೂ ಸೇರಿ 13 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯ ಎಂಜಿನಿಯರ್‌ಗಳು ಅಲ್ಲಿನ ಆಡಳಿತ ವ್ಯವಸ್ಥೆ ರೂಪಿಸಿರುವ ಹೊಸ ಶೈಕ್ಷಣಿಕ ಅರ್ಹತೆಯ ನಿಯಮದಿಂದ ಈಗ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾನೂನಿನಿಂದಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಸುಮಾರು 2,500ಕ್ಕೂ ಅಧಿಕ ಮಂದಿ ಎಂಜಿನಿಯರಿಂಗ್‌ ಉದ್ಯೋಗಸ್ಥರು ಹಾಗೂ ಅವರ ಕುಟುಂಬಸ್ಥರ ಭವಿಷ್ಯ ತೂಗುಯ್ನಾಲೆಯಲ್ಲಿದೆ.

ಕುವೈಟ್‌ ಉದ್ಯೋಗಿ ಭಾರತೀಯರ ಸಹಿತ ವಿದೇಶಿ ಎಂಜಿನಿಯರ್‌ಗಳ ವಾಸ್ತವ್ಯ ಪರವಾನಗಿ ನವೀಕರಣಕ್ಕೆ ಇನ್ನು ಅಲ್ಲಿನ ಕುವೈಟ್‌ ಎಂಜಿನಿಯರ್ ಸೊಸೈಟಿ (ಕೆಇಎಸ್‌)ಯಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಕಡ್ಡಾಯ ಎಂಬುದಾಗಿ ಕುವೈಟ್‌ನ ಪಬ್ಲಿಕ್‌ ಅಥಾರಿಟಿ ಫಾರ್‌ ಮ್ಯಾನ್‌ಪವರ್‌ (ಪಿಎಎಂ) ಸಂಸ್ಥೆ ನಿಯಮ ಜಾರಿ ಮಾಡಿದೆ.

ಈ ನಿಯಮದಿಂದ ಅತಿಹೆಚ್ಚು ಸಂಕಷ್ಟಕ್ಕೆ ಸಿಲುಕಿರುವವರು ಭಾರತೀಯ ಎಂಜಿನಿಯರ್‌ಗಳು. ಇಷ್ಟು ಗಂಭೀರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತುರ್ತಾಗಿ ಮಧ್ಯಪ್ರವೇಶ ಮಾಡುವ ಮೂಲಕ ತಮ್ಮ ರಕ್ಷಣೆಗೆ ಬರುವಂತೆ ಭಾರತೀಯ ಎಂಜಿನಿಯರ್‌ಗಳು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಟ್ವೀಟ್‌ ಮಾಡಿದ್ದಾರೆ. ಆದರೆ ಇಲ್ಲಿಯ ವರೆಗೆ ಭಾರತ ಸರಕಾರದಿಂದ ಸ್ಪಂದನೆಯ ಭರವಸೆ ಸಿಕ್ಕಿಲ್ಲ.

ಒಂದು ಮಾಹಿತಿ ಪ್ರಕಾರ ಕುವೈಟ್‌ನಲ್ಲಿ ಒಟ್ಟು 90 ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ. ಈ ಪೈಕಿ 13 ಸಾವಿರಕ್ಕೂ ಅಧಿಕ ಮಂದಿ ಎಂಜಿನಿಯರ್‌ಗಳು. ಕರ್ನಾಟಕದವರು ಅಧಿಕ ಸಂಖ್ಯೆಯಲ್ಲಿದ್ದು, ಸುಮಾರು 2,500 ಮಂದಿ ದಕ್ಷಿಣ ಕನ್ನಡ, ಉಡುಪಿ ಕರಾವಳಿ ಭಾಗದವರು ಎನ್ನಲಾಗಿದೆ. ಈ ಹೊಸ ನಿಯಮದ ಅನುಸಾರ ನಿರಾಕ್ಷೇಪಣ ಪತ್ರ ಪಡೆಯಲು ವಿಫ‌ಲರಾದರೆ ಈ ಎಂಜಿನಿಯರ್‌ಗಳ ಪೈಕಿ ಶೇ. 90ರಷ್ಟು ಮಂದಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ಮರಳಬೇಕಿದೆ.

ಹೊಸ ನಿಯಮ ಏನು?
2018ರ ಮಾ. 11ರಿಂದ ಮೊದಲ್ಗೊಂಡು ಕೆಇಎಸ್‌ನಿಂದ ಎನ್‌ಒಸಿ ಪಡೆಯದೆ ಅಲ್ಲಿ ಕೆಲಸ ಮಾಡುವ ವಿದೇಶೀ ಎಂಜಿನಿಯರ್‌ಗಳ ವಾಸ್ತವ್ಯ ಪರವಾನಿಗೆ ನವೀಕರಿಸಬಾರದು ಎಂಬುದಾಗಿ ಕುವೈಟ್‌ನ ಪಿಎಎಂ ಸಂಸ್ಥೆಯು ಎಲ್ಲ ಕಾರ್ಮಿಕ ಇಲಾಖೆಗಳಿಗೆ ಸುತ್ತೋಲೆಯನ್ನು ಕಳುಹಿಸಿದೆ. ಕೆಇಎಸ್‌ನಿಂದ ಎನ್‌ಒಸಿ ಪಡೆದುಕೊಳ್ಳದಿದ್ದರೆ ಅಂಥ ಎಂಜಿನಿಯರ್‌ಗಳ ಕೆಲಸದ ವೀಸಾ ನವೀ ಕರಣ ಈ ಹೊಸ ನಿಯಮದಿಂದಾಗಿ ಅಸಾಧ್ಯ. ಅಂದರೆ ಕುವೈಟ್‌ನ ಈ ಎಂಜಿನಿಯರ್‌ಗಳ ಸಂಘಟನೆಯು ಮಾನ್ಯ ಮಾಡಿರುವ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳ ಪ್ರಮಾಣಪತ್ರ ಹೊಂದಿ ರುವ ಎಂಜಿನಿಯರ್‌ಗಳಿಗಷ್ಟೇ ಇನ್ನು ಮುಂದೆ ಅಲ್ಲಿ ಕೆಲಸಕ್ಕೆ ಅವಕಾಶವಿದೆ. ಕೆಇಎಸ್‌ ಅರ್ಹತಾ ಪಟ್ಟಿಯಲ್ಲಿ ಇಲ್ಲದ ಶಿಕ್ಷಣ ಸಂಸ್ಥೆಗಳ ಪದವಿ ಹೊಂದಿರುವ ಎಂಜಿನಿಯರ್‌ಗಳ ವಾಸ್ತವ್ಯ ಪರವಾನಗಿ ನವೀಕರಿಸದಂತೆ ಆದೇಶಿಸಲಾಗಿದೆ.

ಹೊಸ ನಿಯಮಾವಳಿಯ ಸಮಸ್ಯೆ ಬಹು ಆಯಾಮವನ್ನು ಪಡೆದುಕೊಂಡಿದ್ದು, ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗುವ ಹೊಸ ಎಂಜಿನಿಯರ್‌ಗಳಿಗೂ ಕುತ್ತು ತರಲಿದೆ. ಕೆಇಎಸ್‌ನಿಂದ ಎನ್‌ಒಸಿ ಪಡೆಯಬೇಕಾದರೆ ಎಂಜಿನಿಯರ್‌ಗಳು ಪದವಿ ಪಡೆದಿರುವ ಕಾಲೇಜು ಅಥವಾ ವಿ.ವಿ. ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಎಬಿ) ಯಿಂದ ಮಾನ್ಯತೆ ಪಡೆದಿರಬೇಕಾಗುತ್ತದೆ. ಇದು ಈ ನಿಯಮದಿಂದ ಉದ್ಭವಿಸುವ ಇನ್ನೊಂದು ಸಮಸ್ಯೆ. ಹೀಗಾಗಿ ಕೇಂದ್ರ ಸರಕಾರ ದೇಶದ ಎಲ್ಲ ಎಂಜಿನಿಯರಿಂಗ್‌ ಕಾಲೇಜು/ ವಿ.ವಿ.ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗುತ್ತದೆ. ಎಂಜಿನಿಯರಿಂಗ್‌ ಕಾಲೇಜು /ವಿ.ವಿ.ಗಳು ಎನ್‌ಎಬಿ ಮಾನ್ಯತೆ ಪಡೆ ಯುವ ಬದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ.

ಅನಿವಾಸಿ ಎಂಜಿನಿಯರ್‌ಗಳು ಕೆಇಎಸ್‌ ಸದಸ್ಯತ್ವ ಪಡೆಯಬೇಕೆಂಬ ನಿಯಮ ಹಿಂದೆಯೂ ಇತ್ತು. ಆದರೆ ಈಗಿನಷ್ಟು ಕಟ್ಟುನಿಟ್ಟಾಗಿ ಇರಲಿಲ್ಲ. ಈಗ ಅರ್ಹತಾ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಎನ್‌ಎಬಿ ಮಾನ್ಯತೆ ಇಲ್ಲದ ಕಾಲೇಜು/ ವಿ.ವಿ. ಎಂಜಿನಿಯರಿಂಗ್‌ ಪದವಿ ಪಡೆದಿದ್ದರೆ ಪರೀಕ್ಷೆಗೆ ಹಾಜರಾಗುವಂತಿಲ್ಲ.

ಸಮಸ್ಯೆಯ ಇನ್ನೊಂದು ಮುಖ
ಕುವೈಟ್‌ನಲ್ಲಿ ಸುಮಾರು 25- 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಭಾರತದ ಎಂಜಿನಿಯರ್‌ಗಳು ಬಹಳಷ್ಟು ಮಂದಿ ಇದ್ದಾರೆ. ಎರಡು-ಮೂರು ದಶಕಗಳ ಹಿಂದೆ ಎನ್‌ಎಬಿ ಸಂಸ್ಥೆ ಇರಲಿಲ್ಲ. ಹಾಗಾಗಿ ಅವರು ಹೊಂದಿರುವ ಪದವಿ ಪ್ರಮಾಣ ಪತ್ರವು ಎನ್‌ಎಬಿ ಅನುಮೋದನೆ ಪಡೆದಿರುವುದಿಲ್ಲ. ಅಂಥವರು ಈಗ ಪರೀಕ್ಷೆ ಬರೆದು ಪಾಸಾಗಿ ಎನ್‌ಒಸಿ ಪಡೆಯಬೇಕಿದೆ. ಇಲ್ಲಿ ಸಮಸ್ಯೆಯಾಗುವುದು ಹಳೆಯ ಮತ್ತು ಹೊಸ ಪಠ್ಯ. 25-30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದಿದ್ದನ್ನು ಅವರು ಪುನರ್‌ ಮನನ ಮಾಡುವ ಆವಶ್ಯಕತೆ ಇದೆ. ಜತೆಗೆ ಈಗಿರುವ ಪಠ್ಯ ವಿಷಯಗಳನ್ನು ಕೂಡ ಕಲಿಯಬೇಕಾಗುತ್ತದೆ.

ಎನ್‌ಒಸಿ ಪಡೆಯುವ ಬಗ್ಗೆ ಕಳೆದ ಕೆಲವು ದಿನಗಳಿಂದ ಕೆಇಎಸ್‌ ಸಂಸ್ಥೆಯ ಎದುರು ಅನಿವಾಸಿ ಎಂಜಿನಿ
ಯರುಗಳು ಸಾಲುಗಟ್ಟಿ ನಿಂತಿದ್ದಾರೆ. ಈ ಮಧ್ಯೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ ಇಂಡಿಯಾದ ಕುವೈಟ್‌ ಘಟಕವು ಕೆಇಎಸ್‌ಗೆ ಪತ್ರವೊಂದನ್ನು ಬರೆದು ಈ ನಿಯಮಾವಳಿಗಳ ಅನುಷ್ಠಾನವನ್ನು ಮುಂದೂಡುವಂತೆ ಮನವಿ ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಕುವೈಟ್‌ನಲ್ಲಿರುವ ಭಾರತೀಯ ಎಂಬೆಸಿಗೆ ಹೊಸ ರಾಯಭಾರಿ ಬಂದಿದ್ದು, ಅವರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ.

ಶೇ. 90 ಎಂಜಿನಿಯರ್‌ ಆತಂಕದಲ್ಲಿ  !
ಹೊಸ ನಿಯಮಾವಳಿ ಬಗ್ಗೆ ಕುವೈಟ್‌ನಲ್ಲಿರುವ ಶೇ. 99ರಷ್ಟು ಭಾರತೀಯ ಎಂಜಿನಿಯರುಗಳು ಆತಂಕಗೊಂಡಿದ್ದಾರೆ. ಉದ್ಯೋಗವನ್ನು ಕಳೆದುಕೊಳ್ಳುವ ಮತ್ತು ತಮ್ಮ ಕುಟುಂಬ ಬೀದಿ ಪಾಲಾಗುವ ಭೀತಿಯಲ್ಲಿದ್ದಾರೆ. ಕೇಂದ್ರ ಸರಕಾರ ತುರ್ತಾಗಿ ಮಧ್ಯ ಪ್ರವೇಶಿಸಿ ಕುವೈಟ್‌ ಸರಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರಾದ ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮಾಡಿದ್ದರೂ ಸ್ಪಂದಿಸದಿರುವುದೇಕೆ ಎಂದು ಅರ್ಥವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ನಿಯಮ ಇತರ ಗಲ್ಫ್ ರಾಷ್ಟ್ರಗಳಲ್ಲಿಯೂ ಜಾರಿಗೆ ಬರುವುದನ್ನು ಅಲ್ಲಗಳೆಯಲಾಗದು. ಕೊಲ್ಲಿ ರಾಷ್ಟ್ರಗಳಲ್ಲಿ ಈಗಾಗಲೇ ಹೊರ ದೇಶದವರಿಗೆ ಉದ್ಯೋಗ ಕಡಿಮೆಯಾಗುತ್ತಿದ್ದು, ಇಂಥ ನಿಯಮ ಇತರೆಡೆಯೂ ಜಾರಿಯಾದರೆ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಕರಾವಳಿಯ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಮೋಹನದಾಸ್‌ ಕಾಮತ್‌, ಅನಿವಾಸಿ ಕನ್ನಡಿಗ ಎಂಜಿನಿಯರ್‌