ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಮುಖ್ಯಮಂತ್ರಿ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್‌) ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ಕೆಆರ್‌ಎಸ್‌ಗೆ ಬಿಎಸ್‍ವೈ ನಾಲ್ಕನೇ ಬಾರಿ ಬಾಗಿನ ಅರ್ಪಿಸಿದರು.

ಬಾಗಿನ ಸಲ್ಲಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದೇನೆ. 1 ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡುತ್ತಿದ್ದೆವು. ಪ್ರತಿ ದಿನ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗೆ ಕರೆಮಾಡಿ ಜಲಾಶಯದ ಒಳಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆದರೆ ವರುಣದೇವನ ಕೃಪೆಯಿಂದ ಕೇವಲ 4-5ದಿನಗಳಲ್ಲಿ ಕೆಆರ್‍ಎಸ್ ಭರ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಭರದಿಂದ ಸಾಗಿದೆ. ಕೆರೆಗಳಲ್ಲಿ ನೀರು ಸಂಗ್ರಹದಿಂದ ಅಂತರ್ಜಲ ಕುಸಿಯುವುದು ತಪ್ಪಲಿದೆ. ಕೆಆರ್‌ಎಸ್‌ ಅಭಿವೃದ್ಧಿಗೆ ನಾನು ಶ್ರಮಿಸಲಿದ್ದೇನೆ. ದೇಶವಿದೇಶಗಳಿಂದ ಬರುವ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿ ಕೆಆರ್‌ಎಸ್‌ ಅಣೆಕಟ್ಟೆಯನ್ನು ರೂಪಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಎಸ್ಟಿಮೇಟ್ ಕಳುಹಿಸುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.