ಕೊರೋನಾ ನಿಯಂತ್ರಿಸುವ ಜವಾಬ್ದಾರಿ ಹೊತ್ತ ಸರ್ಕಾರವೇ ಹಗಲು ದರೋಡೆಗೆ ನಿಂತಿದೆ : ಡಿ.ಕೆ.ಶಿವಕುಮಾರ್ -Vishwanews24
ಕಲಬುರ್ಗಿ: ಕೊರೋನಾ ನಿಯಂತ್ರಿಸುವ ಜವಾಬ್ದಾರಿ ಹೊತ್ತ ಸರ್ಕಾರವೇ ಹಗಲು ದರೋಡೆಗೆ ನಿಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೊರೋನಾ ಭ್ರಷ್ಟಾಚಾರ ಬಯಲಿಗೆಳೆದರೆ ನಮಗೆ ನೋಟೀಸ್ ನೀಡುತ್ತಾರೆ. ಇಂತಹ ನೂರು ನೋಟೀಸ್ ಕೊಟ್ಟರೂ ನಾವು ಹೆದರಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೋವಿಡ್ ಬಂದು ಹಣ ಲೂಟಿ ಮಾಡಲು ನಿಮಗೆ ಹಬ್ಬ ಆಗಿದೆ. ಕೋವಿಡ್ ನಲ್ಲಿ ನನಗೇನು ಸಿಗುತ್ತೆ ಅಂತ ಪ್ರತಿಯೊಬ್ಬ ಮಂತ್ರಿ ಚಿಂತೆ ಮಾಡ್ತಿದಾನೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ, ಇಡೀ ಭಾರತದಲ್ಲಿ ರಾಜ್ಯದಲ್ಲಿ ಹೆಚ್ಚು ಆಸ್ಪತ್ರೆ, ಮೇಡಿಕಲ್ ಕಾಲೇಜುಗಳಿವೆ. 10,500ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಮಾಡಲು ಸಿದ್ಧತೆ ನಡೆದಿತ್ತು. ನಾಲ್ಕು ಸಾವಿರ ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಎಲ್ಲಾ ಇಲಾಖೆಯ ಖರೀದಿಯಲ್ಲಿ ಅವ್ಯವಹಾರ ಆಗಿದೆ. ಆರೋಗ್ಯ, ಆಹಾರ ವಿಚಾರದಲ್ಲಿ ದುಡ್ಡು ಹೊಡೆಯುವುದು ಎಷ್ಟು ಸರಿ. ಭ್ರಷ್ಟಾಚಾರ ಮಾಡೋಕೆ ನಾವು ಸಹಕಾರ ನೀಡಬೇಕಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಕೊರೋನಾ ಸೋಂಕು ಹಂಚಲು ನೀವೇ ಕಾರಣಕರ್ತರು. ನಿಮ್ಮ ಮೇಲೆಯೇ ಕೇಸ್ ದಾಖಲಾಗಬೇಕು ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೊರೋನಾದಲ್ಲಿ ಅಕ್ರಮ ಆಗಿದೆ ಅಂದ್ರೆ ನಮಗೆ ನೋಟಿಸ್ ಕೊಡ್ತಿರಾ? ಯಾವ ನೋಟಿಸ್ಗೂ ಹೆದರಲ್ಲ. ಇಂತಹ ನೂರು ನೋಟಿಸ್ ಕೊಟ್ಟರೂ ಎದುರಿಸೋ ಶಕ್ತಿ ನಮಗೆ ಜನತೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
