ಗೋ ಮಾಂಸ ರಫ್ತು ಮಾಡುವವರಲ್ಲಿ ಬಹುತೇಕ ಬಿಜೆಪಿ ಬೆಂಬಲಿಗರೇ ಇದ್ದಾರೆ ; ಸಿದ್ದರಾಮಯ್ಯ -Vishwanews24
ಗೋ ಮಾಂಸ ರಫ್ತು ಮಾಡುವವರಲ್ಲಿ ಬಹುತೇಕ ಬಿಜೆಪಿ ಬೆಂಬಲಿಗರು; ಸಿದ್ದರಾಮಯ್ಯ -Vishwanews24
ಬೆಂಗಳೂರು: ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಬಿಜೆಪಿಯವರು ಸದನದಲ್ಲಿ ಏಕಾಏಕಿ ವಿಧೇಯಕ ಮಂಡನೆ ಮಾಡಿದರು. 1964ರ ಕಾಯ್ದೆಗೆ ಅನೇಕ ತಿದ್ದುಪಡಿ ಮಾಡಿದ್ದಾರೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ 1964ರಂದ ಅಸ್ಥಿತ್ವದಲ್ಲಿದೆ. ಅದರಲ್ಲಿ ಯಾವ ಪ್ರಾಣಿಗಳನ್ನು ವಧೆ ಮಾಡಬಹುದೆಂದು ತಿಳಿಸಿದೆ. 12 ವರ್ಷ ತುಂಬಿದ್ದರೆ ಅಂಥವನ್ನು ವಧೆ ಮಾಡಬಹುದು. ಹಸು ಅಥವಾ ಎಮ್ಮೆ ಗೊಡ್ಡಾದರೆ, ಹಾಲು ಕರೆಯದಿದ್ದರೆ ವಧೆ ಮಾಡಬಹುದು. ಪ್ರಾಣಿ ರೋಗಗ್ರಸ್ಥವಾಗಿದ್ದರೆ ತಿನ್ನಲು ಯೋಗ್ಯವಲ್ಲ. ಈ ಎಲ್ಲಾ ಅಂಶಗಳು ಆ ಕಾಯ್ದೆಯಲ್ಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೋದಿಯವರು ಪ್ರಧಾನಿಯಾದ ಬಳಿಕ ಗೋ ಮಾಂಸ ರಫ್ತು ಪ್ರಮಾಣ ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಗೋ ಮಾಂಸ ರಫ್ತು ಮಾಡುವವರಲ್ಲಿ ಬಹುತೇಕ ಬಿಜೆಪಿ ಬೆಂಬಲಿತರೇ ಇದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಈಗಾಗಲೇ ಇರುವ ಗೋಹತ್ಯೆ ನಿಷೇಧ ಕಾಯ್ದೆಗೆ ಈಗ ತಿದ್ದುಪಡಿ ತಂದಿದ್ದಾರೆ. ತಿದ್ದುಪಡಿಗೂ ಮುನ್ನ ಯಾವುದೇ ಅಧ್ಯಯನ ಮಾಡಿಲ್ಲ. ಅಧ್ಯಯನ ಮಾಡಿರುವ ವರದಿಯನ್ನೂ ನೋಡಿಲ್ಲ. ಕಾನೂನು ತರಬೇಕಾದರೆ ಸಾಧಕ, ಬಾಧಕಗಳನ್ನು ನೋಡಬೇಕು. ಕೇವಲ ಭಾವನಾತ್ಮಕವಾಗಿ ಈ ಕಾಯ್ದೆಯನ್ನು ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು ಇದನ್ನು ತಂದಿದ್ದಾರೆ. ವೈಜ್ಞಾನಿಕವಾಗಿ ಅಧ್ಯಯನ ಮಾಡದೆ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ವಿಧೇಯಕವನ್ನು ಕಾನೂನು ಮಾಡ ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನಸಭಾಧ್ಯಕ್ಷರೂ ಕೂಡಾ ಆರ್‌ಎಸ್‌ಎಸ್‌ಗೆ ಬೆಂಬಲ ನೀಡುವ ಕಾರಣ ಗೋ ಹತ್ಯೆ ನಿಷೇಧ ವಿಧೇಯಕ ಪಾಸ್ ಆಗಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ. ದೇಶದ ಅನೇಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಇಲ್ಲ, ರಾಜ್ಯಕ್ಕೆ ಮಾತ್ರ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ದೇಶಕ್ಕೇ ಒಂದು ಪಾಲಿಸಿ, ಕರ್ನಾಟಕ ಹಾಗೂ ಉತ್ತರ ಪ್ರದೇಶ ಮಾತ್ರ ಮತ್ತೊಂದು ನೀತಿ ಏಕೆ ಎಂದು ಸವಾಲೆಸೆದಿರುವ ಸಿದ್ದರಾಮಯ್ಯ, ಕೇರಳ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಏಕೆ ಕಾಯ್ದೆ ಜಾರಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಗೋ ಮಾತೆ ಅಂತ ಪೂಜೆ ಮಾಡಿದರೆ ಆಗೋಯ್ತೇ? ನಾವು ಸಂಕ್ರಾಂತಿಯಲ್ಲಿ ಗೋ ಪೂಜೆ ಮಾಡುತ್ತೇವೆ. ದೀಪಾವಳಿ ಹಬ್ಬದಲ್ಲೂ ಎಡೆ ಹಾಕುತ್ತೇವೆ. ಸಾಕುವವರು ಅವುಗಳಿಗೆ ಪೂಜೆ ಮಾಡುತ್ತಾರೆ. ಯಾರು ಸಾಕೋದಿಲ್ಲ ಅವರು ಈ ಕಾನೂನು ತರ್ತಾರೆ. ಇದು ರೈತರ ಮೇಲೆ ಮತ್ತಷ್ಟು ಸಂಕಷ್ಟ ತಂದಿಡಲಿದೆ. ರೈತರು ಹಸು ಸಾಕೋದಕ್ಕೂ ಮುಂದೆ ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
