ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಮಸೂದ್ , ಹಫೀಜ್ , ದಾವೂದ್, ರೆಹಮಾನ್ ಲಖ್ವಿ ಸೇರ್ಪಡೆ : ಮಹತ್ವದ ತೀರ್ಮಾನ ಕೈಗೊಂಡಿದ ಭಾರತ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ರಾಷ್ಟ್ರ ನ್ಯೂಸ್

ಹೊಸ ದಿಲ್ಲಿ: ಪಾಕಿಸ್ತಾನದ ನಾಲ್ವರು ಭಯಂಕರ ಉಗ್ರರು ಇದೀಗ ‘ಘೋಷಿತ ಉಗ್ರರ ಪಟ್ಟಿ’ ಸೇರಿದ್ದಾರೆ. ಮಸೂದ್ ಅಝರ್, ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ ಹಾಗೂ ಝಾಕಿ-ಉರ್-ರೆಹಮಾನ್ ಲಖ್ವಿ ಹೆಸರುಗಳನ್ನು ‘ಘೋಷಿತ ಉಗ್ರರ ಪಟ್ಟಿ’ಗೆ ಸೇರ್ಪಡೆ ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ತಿದ್ದುಪಡಿ ಕಾನೂನಿನ ಅನ್ವಯ, ಈ ನಾಲ್ವರ ಹೆಸರುಗಳನ್ನು ಭಾರತ ಸರ್ಕಾರ ಸೇರ್ಪಡೆ ಮಾಡಿದೆ. ತಿದ್ದುಪಡಿ ಕಾಯ್ದೆ ಜಾರಿಯಾದ ಒಂದು ತಿಂಗಳ ಬಳಿಕ ಭಾರತ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಮೌಲಾನಾ ಮಸೂದ್ ಅಝರ್ ಹಾಗೂ ಹಫೀಜ್ ಮುಹಮ್ಮದ್ ಸಯೀದ್ ನೇರವಾಗಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗದಿದ್ದರೂ, ಭಯೋತ್ಪಾದನೆಗೆ ಆರ್ಥಿಕ ಸಹಕಾರ, ತರಬೇತಿ ಹಾಗೂ ಬೆಂಬಲ ನೀಡ್ತಿರುವ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಕಾಯ್ದೆಯನ್ವಯ ‘ಘೋಷಿತ ಉಗ್ರರ ಪಟ್ಟಿ’ಗೆ ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

1967ರ ಮೂಲ ಕಾನೂನಿನಲ್ಲಿ ವೈಯಕ್ತಿಕವಾಗಿ ಯಾರನ್ನೂ ಉಗ್ರರು ಎಂದು ಘೋಷಿಸಲು ಸಾಧ್ಯವಿರಲಿಲ್ಲ. ಗುಂಪು ಅಥವಾ ಸಂಘಟನೆಯನ್ನು ಮಾತ್ರ ಉಗ್ರರೆಂದು ಘೋಷಿಸಬಹುದಿತ್ತು. ಇದೀಗ ಸರ್ಕಾರ ಈ ನಾಲ್ವರನ್ನೂ ‘ವೈಯಕ್ತಿಕ ಘೋಷಿತ ಉಗ್ರ’ರು ಎಂದು ಘೋಷಿಸಿರುವುದರಿಂದ ‘ರೆಡ್ ಕಾರ್ನರ್’ ನೊಟೀಸ್ ಹೊರಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದ ನಿರ್ಧಾರಕ್ಕೆ ಅಮೆರಿಕ ಪ್ರಶಂಸೆ

ಭಾರತದ ದಿಟ್ಟ ಕ್ರಮದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾ ಭಾಗದ ಪ್ರಧಾನ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ.ವೆಲ್ಸ್ ಅವರು, ಭಾರತದ ನೂತನ ಭಯೋತ್ಪಾದನಾ ತಡೆ ಕಾಯ್ದೆ ಹಾಗೂ ಪಟ್ಟಿಯಲ್ಲಿ ನಾಲ್ವರು ಉಗ್ರರ ಸೇರ್ಪಡೆಗೊಳಿಸಿರುವುದನ್ನು ಅಮೆರಿಕಾ ಬೆಂಬಲಿಸುತ್ತದೆ ಹಾಗೂ ಅದನ್ನು ಪ್ರಶಂಸಿಸುತ್ತದೆ. ಭಾರತದ ಈ ಹೊಸ ಕಾನೂನು ಉಗ್ರರನ್ನು ಮಟ್ಟಹಾಕಲು ಭಾರತ ಹಾಗೂ ಅಮೆರಿಕಾ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.