ಜನರು ಈಗ ‘ಬಿಜೆಪಿ ಮುಕ್ತ ಭಾರತ’ ಮಾಡುತ್ತಿದ್ದಾರೆ : ಸಿದ್ದರಾಮಯ್ಯ -Vishwanews24
ಬೆಂಗಳೂರು: ಕೇಜ್ರಿವಾಲ್ ಒಳ್ಳೆಯ ಕೆಲಸ ಮಾಡಿದ್ದರು, ಜನರು ಜಿಡಿಪಿ ಕುಸಿತದಿಂದ ರೋಸಿ ಹೋಗಿದ್ದರು. ಹಾಗಾಗಿ ದೆಹಲಿಯಲ್ಲಿ ಜನರು ಆಮ್ ಆದ್ಮಿ ಪಾರ್ಟಿ (ಆಪ್) ಕೈ ಹಿಡಿದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲ ರೀತಿಯ ಸಂಪನ್ಮೂಲಗಳನ್ನು ಇಟ್ಟುಕೊಂಡಿದ್ದರು. ಅವರದೇ ಪಕ್ಷದ ಕೇಂದ್ರ ಸರ್ಕಾರ, ಸಂಸದರು ಇದ್ದರೂ ಗೆಲ್ಲಲು ಆಗಲಿಲ್ಲ. ಒಂದಂತೂ ಸತ್ಯ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿದ್ದ ಬಿಜೆಪಿಯನ್ನು ಈಗ ಜನರೇ ‘ಬಿಜೆಪಿ ಮುಕ್ತ ಭಾರತ’ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿದೆ ಎಂದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಗಳಿಸುವುದೆಂದು ನಮಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ನಾಲ್ಕೈದು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದುಕೊಂಡಿದ್ದೆವು, ಇದರಿಂದ ನಮಗೇನೂ ನಷ್ಟವಾಗಿಲ್ಲ ಎಂದು ಹೇಳಿದರು.
ನಿನ್ನೆ ಮಂತ್ರಿಯಾದ ಚಿಕ್ಕಬಳ್ಳಾಪುರದವರೊಬ್ಬರು ಏನು ಮಾಡಿದರೂ ಅಲ್ಲಿ ವರ್ಕೌಟ್ ಆಗಿಲ್ಲ. ಅಲ್ಲಿ ನಮಗೆ ಸ್ಪಷ್ಟಬಹುಮತ ಬಂದಿದೆ. ಹೊಸಕೋಟೆಯಲ್ಲಿ ನಮ್ಮವರಿಗೆ ಖರ್ಚು ಮಾಡುವ ಶಕ್ತಿ ಇರಲಿಲ್ಲ. ಎಂಟಿಬಿ ನಾಗರಾಜ್ ಹಣ ಖರ್ಚು ಮಾಡಿದ್ದಾರೆ. ಅದಕ್ಕೇ ಹೊಸಕೋಟೆಯಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
